
ಚಾಲುಕ್ಯ ಉತ್ಸವ
(ಸಂಗ್ರಹ ಚಿತ್ರ)
ಬಾಗಲಕೋಟೆ: ಮುಂದಾಲೋಚನೆ ಕೊರತೆಯಿಂದ ಹತ್ತು ವರ್ಷಗಳ ನಂತರ ನಿಗದಿಯಾಗಿದ್ದ ಚಾಲುಕ್ಯ ಉತ್ಸವ ಮುಂದೂಡಿಕೆಯಾಗಿದೆ. ನಿತ್ಯದ ಕೆಲಸ ಬಿಟ್ಟು ವಾರದಿಂದ ಅಧಿಕಾರಿಗಳು ನಡೆಸಿದ್ದ ಸಭೆ, ಸಮಯ ವ್ಯರ್ಥವಾಗಿದೆ. ಎಲ್ಲವನ್ನೂ ಕೆಲ ದಿನಗಳ ನಂತರ ಮತ್ತೇ ಮಾಡಬೇಕಿದೆ.
ಡಿ.19ರಿಂದ ಮೂರು ದಿನಗಳ ಕಾಲ ಉತ್ಸವ ಆಯೋಜಿಸಲಾಗಿತ್ತು. ಈಗ ಬೆಳಗಾವಿಯಲ್ಲಿ ಚಳಿಗಾಲ ಅವಧಿವೇಶನ ನಡೆದಿರುವುದರಿಂದ ಸಿದ್ಧತೆಗೆ ತೊಂದರೆಯಾಗುತ್ತದೆ ಎಂದು ಮುಂದೂಡಲಾಗಿದೆ. ಹತ್ತು ವರ್ಷಗಳಿಂದ ಪ್ರತಿ ಬಾರಿ ಡಿಸೆಂಬರ್‌ನಲ್ಲಿ ಎರಡು ವಾರಗಳ ಕಾಲ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತದೆ. ಇದು ದಿನಾಂಕ ನಿಗದಿ ಮಾಡಿದವರಿಗೆ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ.
ಬಜೆಟ್‌ನಲ್ಲಿಯೇ ಚಾಲುಕ್ಯ ಉತ್ಸವ ಆಚರಣೆ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಬಜೆಟ್‌ನಲ್ಲಿ ಘೋಷಣೆಯಾಗದ ರನ್ನ ಉತ್ಸವ ನಡೆಯಿತು. ಆದರೆ, ಚಾಲುಕ್ಯ ಉತ್ಸವ ನಡೆದಿರಲಿಲ್ಲ. ಈಗ ನಿಗದಿಯಾಗಿದ್ದ ದಿನಾಂಕವೂ ಮುಂದೂಡಲ್ಪಟ್ಟಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ನಡೆದಿರುವ ಕಿತ್ತಾಟ ನಡೆದಿರುವುದು ಉತ್ಸವದ ಮೇಲೆ ಪರಿಣಾಮ ಬೀರಿದೆ. ಅಧಿವೇಶನ ಮುಗಿಯುತ್ತಿದ್ದಂತೆಯೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ದೆಹಲಿಗೆ ತೆರಳುವ ಕಾರಣವೂ ಉತ್ಸವ ಮುಂದೂಡಲಾಗಿದೆ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.
ಸಿದ್ದರಾಮಯ್ಯ ಅವರು 2018 ರಿಂದ 23ರವರೆಗೆ ಬಾದಾಮಿ ಶಾಸಕರಾಗಿದ್ದರು. ಅವರೇ ಬರಬೇಕು ಎನ್ನುವುದು ಕೆಲ ಮುಖಂಡರ ಒತ್ತಾಯ. ಇದು ಉತ್ಸವ ಅತಂತ್ರವಾಗಲು ಕಾರಣ ಎನ್ನಲಾಗುತ್ತಿದೆ.
ಚಾಲುಕ್ಯ ಉತ್ಸವ ಮುಂದೂಡಲು ಚಳಿಗಾಲ ಅಧಿವೇಶನ ನೆಪವಾಗಿದ್ದು, ಅನುದಾನ ದೊರೆಯದಿರುವುದೇ ನಿಜವಾದ ಕಾರಣ ಎಂದು ಹೇಳಲಾಗುತ್ತಿದೆ.
ಚಾಲುಕ್ಯ ಉತ್ಸವಕ್ಕಾಗಿ ಬಜೆಟ್‌ನಲ್ಲಿ ₹2 ಕೋಟಿ ನಿಗದಿ ಮಾಡಲಾಗಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲಿನಲ್ಲಿ ತಲಾ ಒಂದು ದಿನ ಉತ್ಸವ ಆಯೋಜಿಸಲು ಉದ್ದೇಶಿಸಲಾಗಿದೆ. ಪ್ರತಿ ಕಡೆಯೂ ವೇದಿಕೆ ನಿರ್ಮಾಣ ಮಾಡಬೇಕಿದೆ. ಇದು ವೆಚ್ಚದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.
ವೆಚ್ಚ ಸರಿದೂಗಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿತ್ತು. ಅಧಿವೇಶನ, ಮುಖ್ಯಮಂತ್ರಿ ಸ್ಥಾನಕ್ಕೆ ನಡೆದಿರುವ ಗಲಾಟೆಯಲ್ಲಿ ಅನುದಾನ ಬಿಡುಗಡೆಯಾಗಿಲ್ಲ. ಉದ್ದಿಮೆ, ವರ್ತಕರಿಂದಲೂ ಹಣ ಸಂಗ್ರಹಿಸಲು ಉದ್ದೇಶಿಸಲಾಗಿತ್ತು. ಅದೂ ಸಾಧ್ಯವಾಗದ್ದರಿಂದ ಉತ್ಸವ ಮುಂದೂಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.