ADVERTISEMENT

ಬೀಳಗಿ | ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಜೆ.ಟಿ.ಪಾಟೀಲ

ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಶಾಸಕರ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 7:28 IST
Last Updated 2 ಫೆಬ್ರುವರಿ 2026, 7:28 IST
ಬೀಳಗಿ ತಾಲೂಕಿನ ಚಿಕ್ಕ ಸಂಗಮದ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ಶಾಸಕ ಜೆ.ಟಿ.ಪಾಟೀಲ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ.ಎಂ ಬೋಟ್ ಮುಖಾಂತರ ವೀಕ್ಷಿಸಿದರು.
ಬೀಳಗಿ ತಾಲೂಕಿನ ಚಿಕ್ಕ ಸಂಗಮದ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ಶಾಸಕ ಜೆ.ಟಿ.ಪಾಟೀಲ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ.ಎಂ ಬೋಟ್ ಮುಖಾಂತರ ವೀಕ್ಷಿಸಿದರು.   

ಬೀಳಗಿ: ತಾಲ್ಲೂಕಿನ ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅಪಾರ ಪರಿಸರ ಮಹತ್ವ ಹೊಂದಿರುವ ಪ್ರದೇಶವಾಗಿದೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.

ತಾಲ್ಲೂಕಿನ ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ಪರಿಸರ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಭಾನುವಾರ ಶಾಸಕ ಜೆ.ಟಿ.ಪಾಟೀಲ, ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಜಂಟಿಯಾಗಿ ವಿಶೇಷ ಅಧ್ಯಯನ ಭೇಟಿ ನಡೆಸಿದರು.

ಚಿಕ್ಕಸಂಗಮದಲ್ಲಿ ದೋಣಿ ಮೂಲಕ ದ್ವೀಪಗಳು ಮತ್ತು ಸುತ್ತಮುತ್ತಲಿನ ಬ್ಯಾಕ್‌ ವಾಟರ್ ಪ್ರದೇಶವನ್ನು ವೀಕ್ಷಿಸಿ, ನೈಸರ್ಗಿಕ ಪರಿಸರ ಹಾಗೂ ಜೀವ ವೈವಿಧ್ಯವನ್ನು ನೇರವಾಗಿ ಪರಿಶೀಲಿಸಿದರು.

ADVERTISEMENT

ಪ್ರತಿವರ್ಷ ಇಲ್ಲಿ 36ಕ್ಕೂ ಹೆಚ್ಚು ಪ್ರಭೇದದ ವಲಸೆ ಪಕ್ಷಿಗಳು ಆಗಮಿಸುತ್ತಿದ್ದು, ಇದು ಈ ಪ್ರದೇಶದ ಸಮೃದ್ಧ ಜೀವ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಬಾರ್ ಹೆಡೆಡ್ ಗೀಸ್, ಗ್ರೇಟರ್ ಫ್ಲೆಮಿಂಗೋ, ಓರಿಯಂಟಲ್ ಪ್ರಾಟಿನ್‌ಕೋಲ್ ಹಾಗೂ ಡಿಮಾಯ್ಸೆಲ್ ಕ್ರೇನ್ ಪಕ್ಷಿಗಳು ಇಲ್ಲಿ ಪ್ರಮುಖವಾಗಿ ಕಂಡುಬರುವ ವಲಸೆ ಪಕ್ಷಿಗಳಾಗಿವೆ ಎಂದು ವಿವರಿಸಿದರು.

ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಸಮತೋಲನದ ದೃಷ್ಟಿಯಿಂದ, ಚಿಕ್ಕಸಂಗಮ ಪ್ರದೇಶದಲ್ಲಿ ನಿಯಂತ್ರಿತ ದೋಣಿ ವಿಹಾರ, ಪಕ್ಷಿ ವೀಕ್ಷಣೆ, ನೇಚರ್ ಟ್ರೇಲ್‌ಗಳು, ಸೂರ್ಯಾಸ್ತ ವೀಕ್ಷಣೆ ಮತ್ತು ಪ್ರಕೃತಿ ಆಧಾರಿತ ಪ್ರವಾಸ ಚಟುವಟಿಕೆಗಳನ್ನು ಹಂತ ಹಂತವಾಗಿ ಆರಂಭಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದ ಅವರು ಜಂಗಲ್ ಲಾಡ್ಜಸ್ ಮಾದರಿಯಲ್ಲಿ ಪರಿಸರ ಸ್ನೇಹಿ ವಾಸ್ತವ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಸ್ಥಳೀಯ ಯುವಕರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವುದು, ಸ್ವಸಹಾಯ ಸಂಘಗಳ ಮೂಲಕ ಸ್ಥಳೀಯ ಆಹಾರ ಹಾಗೂ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡುವುದು ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಎಂ.ಸಂಗಪ್ಪ ಮಾತನಾಡಿ ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ರಾಷ್ಟ್ರಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪರಿಸರ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ದಿಶೆಯಲ್ಲಿ ಈ ಅಧ್ಯಯನ ಭೇಟಿ ಮಹತ್ವದ ಹೆಜ್ಜೆಯಾಗಿದ್ದು, ಅನುದಾನಿತ ಅಧ್ಯಯನ ವರದಿಗಳ ಆಧಾರದ ಮೇಲೆ ಶೀಘ್ರದಲ್ಲೇ ಸಮಗ್ರ ಕಾರ್ಯಯೋಜನೆ ರೂಪಿಸಿ ಜಾರಿಗೆ ತರಲಾಗುವುದು ಎಂದರು.

ಜಿಲ್ಲಾಡಳಿತ, ಅರಣ್ಯ ಇಲಾಖೆ, ಜಂಗಲ್ ಲಾಡ್ಜಸ್ ಮತ್ತು ನೀರಾವರಿ ಇಲಾಖೆಗಳ ಸಮನ್ವಯದೊಂದಿಗೆ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.

ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.

ತಾಂತ್ರಿಕ ಮತ್ತು ವೈಜ್ಞಾನಿಕ ಅಧ್ಯಯನ ವರದಿಯ ಪ್ರಕಾರ:

ಅಲಮಟ್ಟಿ ಜಲಾಶಯದ ಬ್ಯಾಕ್‌ವಾಟರ್ ವ್ಯಾಪ್ತಿಯಲ್ಲಿರುವ ಚಿಕ್ಕಸಂಗಮ ಸಂರಕ್ಷಣಾ ಮೀಸಲು ಪ್ರದೇಶವು ಅಂದಾಜು 12,359.90 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, 165 ಪಕ್ಷಿ ಪ್ರಭೇದಗಳು, 18 ಸಸ್ತನಿಗಳು, 16 ಸರೀಸೃಪಗಳು ಹಾಗೂ 23 ಮೀನು ಜಾತಿಗಳನ್ನು ಒಳಗೊಂಡ ಅಪಾರ ಜೀವ ವೈವಿಧ್ಯವನ್ನು ಹೊಂದಿದೆ. ಈ ಪ್ರದೇಶವು ಜಗತ್ತಿನಲ್ಲಿಯೇ ಅತಿ ದೊಡ್ಡ ರಿವರ್ ಟರ್ನ್ (River Tern) ವಂಶವೃದ್ಧಿ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಒಂದೇ ಪ್ರದೇಶದಲ್ಲಿ 10,000ಕ್ಕೂ ಅಧಿಕ ಗೂಡುಗಳು ಕಂಡುಬರುವುದು ವಿಶ್ವದಲ್ಲೇ ಅಪರೂಪದ ದಾಖಲೆ ಆಗಿದೆ ಎಂದು ಹೇಳಿದರು.

ಬೀಳಗಿ ತಾಲೂಕಿನ ಚಿಕ್ಕ ಸಂಗಮದ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ಶಾಸಕ ಜೆ.ಟಿ.ಪಾಟೀಲ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ.ಎಂ ಬೋಟ್ ಮುಖಾಂತರ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.