ADVERTISEMENT

ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿ: ನಾಗಣ್ಣಗೌಡ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 3:08 IST
Last Updated 25 ಜುಲೈ 2025, 3:08 IST
ಬಾಗಲಕೋಟೆಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮಾತನಾಡಿದರು
ಬಾಗಲಕೋಟೆಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮಾತನಾಡಿದರು   

ಬಾಗಲಕೋಟೆ: ‘ಮಕ್ಕಳ ರಕ್ಷಣೆಗೆ ಇರುವ ಕ್ರಮಗಳನ್ನು ಕೈಗೊಳ್ಳುವಲ್ಲಿ ಬಹುತೇಕ ಇಲಾಖೆಗಳು ಹಿಂದುಳಿದಿದ್ದು, ಕಡ್ಡಾಯವಾಗಿ ಮಕ್ಕಳ ರಕ್ಷಣೆಗೆ ಕ್ರಮಕೈಗೊಳ್ಳಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ನಿಯಮಿತವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಬೇಕು’ ಎಂದು ತಿಳಿಸಿದರು.

ಡಾ.ತಿಪ್ಪೇಸ್ವಾಮಿ ಮಾತನಾಡಿ, ‘ಮಹಿಳೆ ಮತ್ತು ರಕ್ಷಣಾ ಕಾವಲು ಸಮಿತಿ ಸಭೆಗೆ ಬೀಟ್‌ ಪೊಲೀಸರೂ ಹಾಜರಾಗಬೇಕು. ಸಮುದಾಯ ಭವನದಲ್ಲಿ ಅಂಗನವಾಡಿ ನಡೆಸುವಾಗ ಅಲ್ಲಿಯೇ ಅಡುಗೆ ಮಾಡಬಾರದು’ ಎಂದು ಸೂಚಿಸಿದರು.

ADVERTISEMENT

ಆಯೋಗ ಸದಸ್ಯರಾದ ಮಂಜು ಮಾತನಾಡಿ, ‘ಬಾದಾಮಿಯಲ್ಲಿ ಮಕ್ಕಳ ಅಪೌಷ್ಟಿಕ ಕೇಂದ್ರ ಇಲ್ಲ. ಬಾಗಲಕೋಟೆಗೆ ಬರಬೇಕಾಗಿದೆ. ಗ್ರಾಮೀಣ ಪ್ರದೇಶದಿಂದ ಬರಲು ತೊಂದರೆಯಾಗುವುದಿಲ್ಲವೇ? ಅಂಗನವಾಡಿ ಕೇಂದ್ರಗಳಿಗೆ ಸೊಳ್ಳೆ ಪರದೆ ಬಳಸಬೇಕು’ ಎಂದರು.

ಅಧ್ಯಕ್ಷ ನಾಗಣ್ಣಗೌಡ ಮಾತನಾಡಿ, ‘ಬಾಲ್ಯ ವಿವಾಹ ತಡೆಯಲು ತಳಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನಗಳಾಗಬೇಕು. ಬಾಲ್ಯ ವಿವಾಹವಾದರೆ ಹೆಣ್ಣು ಮಕ್ಕಳ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಇದು ಅಪರಾಧ ಎಂಬುದನ್ನು ಜನರಿಗೆ ತಿಳಿಸಬೇಕು’ ಎಂದು ಹೇಳಿದರು.

ವಿವಿಧ ಇಲಾಖೆಯ ಸಿಬ್ಬಂದಿಗೇ ಮಕ್ಕಳ ರಕ್ಷಣಾ ನೀತಿಯ ಬಗೆಗೆ ಸರಿಯಾದ ಮಾಹಿತಿ ಇಲ್ಲ. ಅವರು ಜನರಿಗೆ ಏನು ಹೇಳುತ್ತಾರೆ. ಅವರಿಗೆಲ್ಲ ತರಬೇತಿ ನೀಡಬೇಕು ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್‌, ಎಸ್ಪಿ ಮಹಾಂತೇಶ ಜಿದ್ದಿ ಇದ್ದರು.

ಕಡ್ಡಾಯವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ ಬರೆಯಿಸಿ:

ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಗ್ರಾಮಸಭೆ ಬಿಟ್ಟರೆ ಬೇರೆ ಮಾಹಿತಿ ಇಲ್ಲ. ಎಲ್ಲ ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಿಸಬೇಕು ಎಂದು ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಸೂಚಿಸಿದರು. ಕೃಷಿ ತೋಟಗಾರಿಕೆ ಇಲಾಖೆಯಿಂದ ನಿರ್ಮಿಸುವ ಕೃಷಿ ಹೊಂಡಗಳಲ್ಲಿ ಬಿದ್ದು ಮಕ್ಕಳನ್ನು ಮೃತರಾಗುತ್ತಿದ್ದಾರೆ. ಅವುಗಳಿಗೆ ಫೆನ್ಸಿಂಗ್‌ ನಿರ್ಮಾಣ ಮಾಡಿರುವುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದರು. ಶಶಿಧರ ಕೋಸುಂಬೆ ಮಾತನಾಡಿ ಶಾಲಾ ಮಕ್ಕಳ ಆಧಾರ್‌ ಸೀಡಿಂಗ್‌ ಕಡ್ಡಾಯವಾಗಿ ಮಾಡಬೇಕು. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದರು. ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು. ಕಳಪೆ ಆಹಾರ ಪೂರೈಕೆಯಾದಾಗ ಅದನ್ನು ವಾಪಸ್ ಕಳುಹಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.