ಬಾಗಲಕೋಟೆ: ವಸತಿ ನಿಲಯದಲ್ಲಿನ ಕಳಪೆ ಶೇಂಗಾ ಪೂರೈಕೆ, ಜಿಲ್ಲಾ ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ನವನಗರ ಪೊಲೀಸ್ ಠಾಣೆಯಲ್ಲಿ ಮಕ್ಕಳ ಸಹಾಯವಾಣಿ ನಂಬರ್ ಫಲಕ ಹಾಕದ್ದಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಆಯೋಗದ ಸದಸ್ಯರಾದ ಶಶಿಧರ ಕೋಸುಂಬೆ, ಶೇಖರಗೌಡ ರಾಮತ್ನಾಳ, ಡಾ.ತಿಪ್ಪೇಸ್ವಾಮಿ ಅವರು ಗುರುವಾರ ವಿವಿಧೆಡೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಸೌಲಭ್ಯಗಳ ಪರಿಶೀಲನೆ ನಡೆಸಿದರು.
ನವನಗರ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಭೇಟಿ ನೀಡಿ, ಶೇಂಗಾ ಕಾಳು ಚೆನ್ನಾಗಿರದಿದ್ದರೂ ಏಕೆ ತೆಗೆದುಕೊಂಡಿರುವಿರಿ. ಗುತ್ತಿಗೆದಾರರಿಗೆ ವಾಪಸ್ ನೀಡುವುದಲ್ಲವೇ? ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸೂಚಿಸಿದರು.
ವಿದ್ಯಾರ್ಥಿಗಳ ಹಾಜರಾತಿ ದಾಖಲಿಸಿರಲಿಲ್ಲ. 96 ವಿದ್ಯಾರ್ಥಿಗಳಿದ್ದರೂ, ಹಾಜರಾತಿ ಹಾಕಿದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ವಸತಿ ನಿಲಯದ ವಾರ್ಡನ್‌ಗೆ ನೋಟಿಸ್ ಜಾರಿ ಮಾಡುವಂತೆ ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದ ಐಸಿಯು ಯುನಿಟ್‌ನಲ್ಲಿ ಕೇವಲ ಇಬ್ಬರು ಮಕ್ಕಳಿದ್ದರು. 250 ಹೆರಿಗೆಗಳಾಗಿದ್ದರೂ ಇಬ್ಬರೇ ಮಕ್ಕಳು ಏಕಿದ್ದಾರೆ? ಐಸಿಯುನಲ್ಲಿ ಎಸಿ ಏಕೆ ಆನ್ ಮಾಡಿಲ್ಲ. ಎಸಿ ಆನ್ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದಾಗ, ಎಸಿ ಯಂತ್ರಗಳು ಹಾಳಾಗಿವೆ ಎಂದು ವೈದ್ಯರು ತಿಳಿಸಿದರು. ಕೂಡಲೇ ದುರಸ್ತಿ ಮಾಡಿ ಎಂದು ಸೂಚಿಸಿದರು.
ಮಕ್ಕಳ ಹಾಲೂಣಿಸುವ ಕೇಂದ್ರದಲ್ಲಿಯೂ ಬಾಣಂತಿಯರಿಗೆ ಸರಿಯಾಗಿ ಕೂಡಲು ವ್ಯವಸ್ಥೆಯಿರಲಿಲ್ಲ. ಸ್ನಾನಗೃಹ, ಶೌಚಾಲಯಗಳು ಸ್ವಚ್ಛವಾಗಿಲ್ಲದ್ದು ಕಂಡು ಮನೆಯಲ್ಲಿಯೂ ಹೀಗೆ ಇಟ್ಟುಕೊಳ್ಳುವಿರಾ ಎಂದು ಪ್ರಶ್ನಿಸಿದರು.
ನವನಗರ ಪೊಲೀಸ್ ಠಾಣೆಯ ಬೋರ್ಡ್‌ನಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ಏಕೆ ಬರೆಸಿಲ್ಲ. ಠಾಣೆಯ ಪಿಎಸ್‌ಐ ಹೆಸರು ಬೋರ್ಡ್‌ನಲ್ಲಿ ಬರೆಯದಿದ್ದಕ್ಕೆ, ಮಕ್ಕಳಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿಡದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.