
ಮಹಾಲಿಂಗಪುರ: ಅರಿಸಿನದಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಅನುಸರಿಸಿ ಹೆಚ್ಚಿನ ಇಳುವರಿ ಪಡೆಯಬಹುದು ಎಂಬುದಕ್ಕೆ ಸಮೀಪದ ಚಿಮ್ಮಡ ಗ್ರಾಮದ ರೈತ ಲಕ್ಕಪ್ಪ ಢವಳೇಶ್ವರ ಸಾಕ್ಷಿಯಾಗಿದ್ದಾರೆ. ಕೇವಲ ಒಂದು ಎಕರೆ ಜಮೀನಿನಲ್ಲಿ ಅಂದಾಜು 47 ಕ್ವಿಂಟಲ್ ಅರಿಸಿನ ಬೆಳೆದು ಹುಬ್ಬೇರಿಸುವಂತೆ ಮಾಡಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಒಂದು ಎಕರೆ ಜಮೀನಿನಲ್ಲಿ ಸೇಲಂ ತಳಿಯ ಅರಿಸಿನ ನಾಟಿ ಮಾಡಲಾಗಿತ್ತು. ಅಂದಾಜು 9 ತಿಂಗಳ ಅವಧಿಯಲ್ಲಿ ಬೆಳೆದು ನಿಂತ ಅರಿಸಿನವನ್ನು ಅಗೆದಾಗ ಬರೋಬ್ಬರಿ 15 ಟ್ರ್ಯಾಕ್ಟರ್ ಡಬ್ಬಿಯಷ್ಟು ಫಸಲು ಬಂದಿದೆ.
‘ಸಾಮಾನ್ಯವಾಗಿ ಎಕರೆಗೆ 20 ರಿಂದ 25 ಕ್ವಿಂಟಲ್ ಇಳುವರಿ ಬರುತ್ತಿತ್ತು. ಆದರೆ ಈ ಬಾರಿ ಅಳವಡಿಸಿಕೊಂಡ ಹೊಸ ಪದ್ಧತಿಯಿಂದಾಗಿ ದಾಖಲೆ ಮಟ್ಟದ ಇಳುವರಿ ಬಂದಿದೆ’ ಎಂದು ಲಕ್ಕಪ್ಪ ಹೇಳಿದರು.
20 ಡಬ್ಬಿ ತಿಪ್ಪೆ ಗೊಬ್ಬರ, ಸಮೀರವಾಡಿ ಕಾರ್ಖಾನೆಯ ಭೂಮಿ ಲಾಭ, ತಂಬಾಕು ದೂಳು ಹಾಗೂ ಅಗತ್ಯ ರಸಗೊಬ್ಬರಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಸಾಲಿನಿಂದ ಸಾಲಿಗೆ 4.5 ಅಡಿ ಅಂತರದಲ್ಲಿ ಬೃಹತ್ ಬದುಗಳನ್ನು ನಿರ್ಮಿಸಿ, ಹನಿ ನೀರಾವರಿ ಮೂಲಕ ನೀರು ಪೂರೈಸಲಾಗಿದೆ. ಅರಿಸಿನದ ಜೊತೆಗೆ ಸ್ವೀಟ್ ಕಾರ್ನ್ ಮತ್ತು ಕೊತ್ತಂಬರಿ ಮಿಶ್ರ ಬೆಳೆ ಬೆಳೆದು ಹೆಚ್ಚುವರಿಯಾಗಿ ₹1.40 ಲಕ್ಷ ಆದಾಯ ಗಳಿಸಿದ್ದಾರೆ.
₹9 ಲಕ್ಷ ಲಾಭದ ನಿರೀಕ್ಷೆ: ಬೀಜ, ಕಳೆ ನಿರ್ವಹಣೆ ಹಾಗೂ ಸಂಸ್ಕರಣೆ ಸೇರಿ ಅಂದಾಜು ₹1.50 ಲಕ್ಷ ಖರ್ಚು ಬಂದಿದೆ. ಸದ್ಯ ಅರಿಸಿನಕ್ಕೆ ಮಾರುಕಟ್ಟೆಯಲ್ಲಿ ಕ್ವಿಂಟಲ್‍ಗೆ ₹15 ರಿಂದ ₹20 ಸಾವಿರ ದರವಿದ್ದು, ಎಲ್ಲ ಖರ್ಚು ಕಳೆದು ಕನಿಷ್ಟ ₹9 ಲಕ್ಷ ನಿವ್ವಳ ಲಾಭ ಬರುವ ನಿರೀಕ್ಷೆಯಿದೆ. ರುದ್ರಪ್ಪ ಹಳಮನಿ ಹಾಗೂ ಅಭಿನಂದನ ಕ್ಯಾಭೋಜಿ ಅವರು ರಸಗೊಬ್ಬರ ಮತ್ತು ತಾಂತ್ರಿಕ ಮಾರ್ಗದರ್ಶನ ನೀಡಿದ್ದಾರೆ.
ದುಡಿಮೆಗೆ ತಕ್ಕ ಪ್ರತಿಫಲ ಸಿಕ್ಕಿದೆ. ಭೂಮಿ ತಾಯಿಯನ್ನು ನಂಬಿ ಸರಿಯಾದ ರೀತಿಯಲ್ಲಿ ಗೊಬ್ಬರ ಮತ್ತು ನೀರಿನ ನಿರ್ವಹಣೆ ಮಾಡಿದ್ದರಿಂದ ಈ ಬಾರಿ ನಿರೀಕ್ಷೆಗೂ ಮೀರಿದ ಅರಿಸಿನದ ಬೆಳೆ ಬಂದಿದೆಲಕ್ಕಪ್ಪ ಢವಳೇಶ್ವರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.