ADVERTISEMENT

ಮಹಾಲಿಂಗಪುರ | ಕಡ್ಡಾಯ ನಿವೃತ್ತಿ: ಜೀವನ ನಿರ್ವಹಣೆಗೆ ಕಾನ್‍ಸ್ಟೆಬಲ್ ಪರದಾಟ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 5:09 IST
Last Updated 16 ಜನವರಿ 2025, 5:09 IST
ನಾವಲಗಿ ಗ್ರಾಮದ ತೋಟದ ಮನೆಯಲ್ಲಿ ತಾಯಿ ಹಾಗೂ ಸಹೋದರನ ಮಗನ ಸಹಾಯದಿಂದ ಎದ್ದು ನಿಲ್ಲುತ್ತಿರುವ ಉದಯಕುಮಾರ ಲೆಂಡಿ. 
ನಾವಲಗಿ ಗ್ರಾಮದ ತೋಟದ ಮನೆಯಲ್ಲಿ ತಾಯಿ ಹಾಗೂ ಸಹೋದರನ ಮಗನ ಸಹಾಯದಿಂದ ಎದ್ದು ನಿಲ್ಲುತ್ತಿರುವ ಉದಯಕುಮಾರ ಲೆಂಡಿ.    

ಮಹಾಲಿಂಗಪುರ: ವೈದ್ಯಕೀಯ ಆಧಾರದ ಮೇಲೆ ‘ಕಡ್ಡಾಯ ನಿವೃತ್ತಿ’ಗೊಂಡಿರುವ ಪಟ್ಟಣದ ಪೊಲೀಸ್ ಠಾಣೆ ಕಾನ್‍ಸ್ಟೆಬಲ್‌ನಾಗಿದ್ದ ಉದಯಕುಮಾರ ಲೆಂಡಿ ಒಂಬತ್ತು ವರ್ಷಗಳಿಂದ ಯಾತನದಾಯಕ ಜೀವನ ನಡೆಸುತ್ತಿದ್ದಾರೆ.

ಕರ್ತವ್ಯದಲ್ಲಿದ್ದಾಗ ನಡೆದ ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ದೈಹಿಕ ಅಂಗವಿಕಲತೆಗೆ ಒಳಗಾಗಿರುವ ಉದಯಕುಮಾರ, ನಾವಲಗಿ ಗ್ರಾಮದ ತೋಟದ ಮನೆಯಲ್ಲಿ ತಾಯಿಯೊಂದಿಗೆ ವಾಸವಿದ್ದಾರೆ. ಏಳಲು, ಕುಳಿತುಕೊಳ್ಳಲು ಹಾಗೂ ನಡೆದಾಡಲು ಕಷ್ಟಪಡುತ್ತಿದ್ದಾರೆ. ಜೀವನ ನಿರ್ವಹಣೆಗೆ ಒಬ್ಬರ ಸಹಾಯ ಬೇಕೇ ಬೇಕು ಎನ್ನುವ ಪರಿಸ್ಥಿತಿ ಇದೆ.

ಆಗಿದ್ದೇನು?: 2009 ರಲ್ಲಿ ಕಾನ್‌ಸ್ಟೆಬಲ್ ಹುದ್ದೆಗೆ ಸೇರಿದ ಉದಯಕುಮಾರ, ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ 2013ರಲ್ಲಿ ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗವಾಗಿದ್ದರು. ಮುಧೋಳ ಆರ್.ಆರ್.ಎಸ್ ಬಂದೋಬಸ್ತ್ ಕರ್ತವ್ಯಕ್ಕೆ ನೇಮಕ ಆಗಿದ್ದ ವೇಳೆ 2015ರ ಜ.24 ರಂದು ನಾವಲಗಿ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ತಲೆಗೆ ಪೆಟ್ಟಾಗಿತ್ತು. ಬೆಳಗಾವಿ, ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗದೆ ಹಲವು ಆರೋಗ್ಯ ತೊಂದರೆಗಳಿಂದ ಬಳಲಿದ್ದರು.

ADVERTISEMENT

ಕಡ್ಡಾಯ ನಿವೃತ್ತಿ ಆದೇಶ: ನಾಲ್ಕು ಜನ ವೈದ್ಯರನ್ನೊಳಗೊಂಡ ತಂಡ ಇವರ ತಪಾಸಣೆ ನಡೆಸಿ ‘ಕಾನ್‌ಸ್ಟೆಬಲ್ ಹುದ್ದೆಯ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿದ್ದಾರೆ’ ಎಂದು ವರದಿ ನೀಡಿತ್ತು. ಅದರನ್ವಯ 2021ರ ಆ.23 ರಂದು ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ‘ಕಡ್ಡಾಯ ನಿವೃತ್ತಿ’ಗೊಳಿಸಿ ಆದೇಶಿಸಿದ್ದಾರೆ.

ದೊರಕದ ಸೌಲಭ್ಯ: ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮದ ಪ್ರಕಾರ ತಿದ್ದುಪಡಿ ನಿಯಮದ ಪ್ರಕಾರ ಸರ್ಕಾರಿ ನೌಕರನನ್ನು ಕಡ್ಡಾಯ ನಿವೃತ್ತಿಗೊಳಿಸಿದರೆ ಹಲವು ಸೌಲಭ್ಯಗಳು ದೊರಕಿಲ್ಲ. 2016ರ ಅಂಗವಿಕಲರ ಕಾಯ್ದೆಯಲ್ಲಿ ‘ಉದ್ಯೋಗದ ಅವಧಿಯಲ್ಲಿ ಉದ್ಯೋಗಿಗೆ ಅಂಗವಿಕಲತೆ ಉಂಟಾದರೆ ಅವರನ್ನು ಕೆಲಸದಿಂದ ತೆಗೆದುಹಾಕುವಂತಿಲ್ಲ ಅಥವಾ ಹಿಂಬಡ್ತಿ ಮಾಡುವಂತಿಲ್ಲ’. ಆದರೆ, ‘ಕಡ್ಡಾಯ ನಿವೃತ್ತಿ’ ನೀಡಲಾಗಿದೆ‌ ಎಂಬುದು ಅವರ ದೂರು.

ಹೀಗಿದೆ ಸ್ಥಿತಿ: 37 ವರ್ಷದ ವಯಸ್ಸಿನ ಉದಯಕುಮಾರ ಅವಿವಾಹಿತರು. ಸ್ವಲ್ಪ ಜಮೀನು ಹೊಂದಿದ್ದಾರೆ. ಚಿಂತೆಯಲ್ಲೇ ತಂದೆ 2017ರಲ್ಲಿ ಮೃತರಾಗಿದ್ದಾರೆ. ತಾಯಿ ಆರೈಕೆಯಲ್ಲಿದ್ದು, ಸಹೋದರನ ಪುತ್ರ ಹಾಗೂ ಸಂಬಂಧಿಕರ ನೆರವಿನಿಂದ ಜೀವನ ನಡೆಸುತ್ತಿದ್ದಾರೆ.

‘ಆರೋಗ್ಯ ಚೇತರಿಕೆಯಾಗುವವರೆಗೆ ಅರ್ಧ ವೇತನ ನೀಡಬೇಕು. ಪೂರ್ಣ ಗುಣಮುಖನಾದ ಮೇಲೆ ಸೇವೆಗೆ ಅವಕಾಶ ನೀಡಬೇಕು’ ಎಂದು ತೊದಲು ಮಾತುಗಳಲ್ಲೇ ಉದಯಕುಮಾರ ಹೇಳಿದರು.

‘ಮಗ ನೌಕರಿ ಸೇರಿದ್ದ ಖುಷಿ ಇತ್ತು. ಮದುವೆ ಮಾಡಬೇಕು ಎಂದುಕೊಂಡಿದ್ದೆವು. ಅಷ್ಟರಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಗೆ ₹25 ಲಕ್ಷ ಖರ್ಚು ಮಾಡಿದ್ದೇವೆ. ಸರ್ಕಾರದಿಂದ ಯಾವುದೇ ಸೌಲಭ್ಯಗಳಿಲ್ಲ’ ಎಂದು ತಾಯಿ ಸುವರ್ಣಾ ತಿಳಿಸಿದರು.

ಕಾನ್‌ಸ್ಟೆಬಲ್ ಉದಯಕುಮಾರ ಲೆಂಡಿ ಅವರ ಕಡ್ಡಾಯ ನಿವೃತ್ತಿ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ ಸೌಲಭ್ಯಗಳನ್ನು ದೊರಕಿಸಲು ಪ್ರಯತ್ನಿಸಲಾಗುವುದು
ಚೇತನಸಿಂಗ್ ರಾಥೋಡ್ ಐಜಿ‍ಪಿ ಬೆಳಗಾವಿ ಉತ್ತರ ವಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.