ADVERTISEMENT

ಕಾಂಗ್ರೆಸ್ ಬಡವರ ವಿರೋಧಿ ಸರ್ಕಾರ: ಸವದಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 15:54 IST
Last Updated 31 ಮೇ 2025, 15:54 IST
ಜನೌಷಧ ಕೇಂದ್ರ ತೆರವು ಖಂಡಿಸಿ ಖಂಡಿಸಿ ರಬಕವಿ– ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು
ಜನೌಷಧ ಕೇಂದ್ರ ತೆರವು ಖಂಡಿಸಿ ಖಂಡಿಸಿ ರಬಕವಿ– ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು   

ರಬಕವಿ- ಬನಹಟ್ಟಿ: ‘ಜನೌಷಧ ಕೇಂದ್ರ ತೆರವಿಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ, ಬಡವರ ಮತ್ತು ದೀನ ದಲಿತರ ವಿರೋಧಿಯಾಗಿದೆ’ ಎಂದು ಶಾಸಕ ಸಿದ್ದು ಸವದಿ ಟೀಕಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರ ತೆರವು ಖಂಡಿಸಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಶನಿವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟಡ ನಿರ್ಮಾಣ ಮಾಡಿದ್ದು, ಈವರೆಗೂ ಕ್ಯಾಂಟೀನ್ ಆರಂಭವಾಗಿಲ್ಲ. ಇಂದಿರಾ ಗಾಂಧಿ ಭಾವಚಿತ್ರ ಪ್ರದರ್ಶನಕ್ಕೆ ಮಾತ್ರ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ’ ಎಂದು ಟೀಕಿಸಿದರು.

ADVERTISEMENT

‘ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ಔಷಧಗಳು ದೊರೆಯುತ್ತಿಲ್ಲ. ಅಲ್ಲಿಯ ವೈದ್ಯರು ಔಷಧಗಳನ್ನು ಹೊರಗೆ ಖರೀದಿಸುವಂತೆ ರೋಗಿಗಳಿಗೆ ತಿಳಿಸುತ್ತಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿರುವ ಜನೌಷಧ ಕೇಂದ್ರಗಳನ್ನು ತೆರವುಗೊಳಿಸುವ ಮೂಲಕ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಸರ್ಕಾರ ಆದಷ್ಟು ಬೇಗ ಆದೇಶ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಅದರಿಂದ ಬರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ. ಕಾಂಗ್ರೆಸ್‌ಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ. ಇದು ಅಭಿವೃದ್ಧಿ ವಿರೋಧಿ ಸರ್ಕಾರವಾಗಿದೆ’ ಎಂದು ಸವದಿ ಟೀಕೆ ಮಾಡಿದರು.

ನಗರಸಭೆ ಅಧ್ಯಕ್ಷೆ ವಿದ್ಯಾ ಧಬಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಸ್ಥಾಯಿ ಸಮಿತಿ ಕಾರ್ಯಾಧ್ಯಕ್ಷ ಅರುಣ ಬುದ್ನಿ, ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ಯಲ್ಲಪ್ಪ ಕಟಗಿ, ಧರೆಪ್ಪ ಉಳ್ಳಾಗಡ್ಡಿ, ಪಾಂಡುರಂಗ ಸಾಲ್ಗುಡೆ, ಶಿವಾನಂದ ಗಾಯಕವಾಡ, ಶ‍್ರೀಶೈಲ ಯಾದವಾಡ, ಗೋವಿಂದ ಡಾಗಾ, ಭುಜಬಲಿ ವೆಂಕಟಾಪುರ, ಶಂಕರ ಪಾಲಬಾವಿ, ಮಹಾವೀರ ಕೊಕಟನೂರ, ಸಚಿನ್ ಕೊಡತೆ, ಶಂಕರಗೌಡ ಪಾಟೀಲ, ಚನ್ನಪ್ಪ ಪಟ್ಟನಶೆಟ್ಟಿ. ಗೌರಿ ಮಿಳ್ಳಿ, ಜಯಶ‍್ರೀ ಬಾಗೇವಾಡಿ, ಸವಿತಾ ಹೊಸೂರ, ದುರ್ಗವ್ವ ಹರಿಜನ, ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.