ADVERTISEMENT

ಜೈಲ್ ಭರೋ ಚಳವಳಿಗೆ ನಾವು ಸಿದ್ಧ: ಬಸವಂತ ಕಾಂಬಳೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:48 IST
Last Updated 17 ನವೆಂಬರ್ 2025, 4:48 IST
ಮುಧೋಳದ ಜಿಎಲ್‍ಬಿಸಿ ಆವರಣದಲ್ಲಿ ರೈತ ಸಂಘದವರು ಭಾನುವಾರ ಸಭೆ ನಡೆಸಿದರು
ಮುಧೋಳದ ಜಿಎಲ್‍ಬಿಸಿ ಆವರಣದಲ್ಲಿ ರೈತ ಸಂಘದವರು ಭಾನುವಾರ ಸಭೆ ನಡೆಸಿದರು   

ಮುಧೋಳ: ರೈತರ ಹೋರಾಟ ರಾಜ್ಯಕ್ಕೆ ಮಾದರಿ. ಹೋರಾಟದಿಂದ ಎಂದಿಗೂ ಯಾರಿಗೂ ಹಾನಿಯಾಗಿಲ್ಲ. ಜಿಲ್ಲಾಡಳಿತದ ಎದುರು ಕಾರ್ಖಾನೆ ಆಡಳಿತ ಮಂಡಳಿಯವರು ಒಪ್ಪಿಕೊಂಡು‌ ಮಾತಿಗೆ ತಪ್ಪಿದ್ದರು. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ತನ್ನ ಕಾರ್ಯವನ್ನು ನಿಭಾಯಿಸಿದ್ದರೆ ಇಂದು ಇಂತಹ ಅವಘಡ ಸಂಭವಿಸುತ್ತಿರಲಿಲ್ಲ, ಜಿಲ್ಲಾಡಳಿತ ಹಾಗೂ ಸರ್ಕಾರದ ವೈಫಲ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಹೇಳಿದರು.

ರೈತ ಸಂಘದ ಕೆಲವು ಕಾರ್ಯಕರ್ತರನ್ನು ಶನಿವಾರ ರಾತ್ರಿ ಬಂಧಿಸಿರುವುದನ್ನು ಖಂಡಿಸಿ ಭಾನುವಾರ ನಗರದ ಜಿಎಲ್‍ಬಿಸಿ ಆವರಣದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರು ರೈತ ಮುಖಂಡರೊಂದಿಗೆ ಚರ್ಚಿಸಿಲ್ಲ. ಗುರ್ಲಾಪುರಕ್ಕೆ ಭೇಟಿ ನೀಡುವ ಸಕ್ಕರೆ ಸಚಿವರು ಮುಧೋಳಕ್ಕೆ ಏಕೆ ಬರಲಿಲ್ಲ ಎಂದರು.

‘ನಾವು ಕಾರ್ಖಾನೆಗೆ ಹೋಗುವ ಮುನ್ನವೇ ಸಮೀರವಾಡಿ ಕಾರ್ಖಾನೆ ಆವರಣದಲ್ಲಿ ಬೆಂಕಿ ಹೊತ್ರಿಕೊಂಡಿದೆ ಎಂಬುದನ್ನು ಸಕ್ಕರೆ ಸಚಿವರು ಸ್ಪಷ್ಟಪಡಿಸಿದ್ದಾರೆ. ಅಷ್ಟಾಗಿಯೂ ಪೊಲೀಸರು ಪ್ರಕರಣದಲ್ಲಿ ಹೋರಾಟದ ರೈತರ ಹೆಸರನ್ನು ಏಕೆ ಸೇರಿಸಿದೆ. ಜಿಲ್ಲಾಡಳಿತ ಸಚಿವರೇ ಈ ಪ್ರಶ್ನೆಗೆ ಉತ್ತರಿಸಬೇಕು’ ಎಂದು ಆಗ್ರಹಿಸಿದರು. ‘ಸರ್ಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿದು ರೈತ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಬಂಧಿಸುವುದಾದರೆ ಎಲ್ಲರನ್ನು ಬಂಧಿಸಲಿ. ನಾವು ಜೈಲ್ ಭರೋ ಚಳುವಳಿ ಮಾಡುತ್ತೇವೆ’ ಎಂದು ಹೇಳಿದರು.

ADVERTISEMENT

ಈರಪ್ಪ ಹಂಚಿನಾಳ ಮಾತನಾಡಿ, ‘ಕಬ್ಬು ಬೆಳೆಗಾರರ ವಿರುದ್ದ ಜಿಲ್ಲಾಡಳಿತ ಪಿತೂರಿ ನಡೆಸಿದೆ. ಆದರೆ ಅದು ಯಶಸ್ವಿಯಾಗದು‌. ಘಟನೆ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ರೈತರು ಜಿಲ್ಲಾಧಿಕಾರಿಗೆ ಹಲವಾರು ಬಾರಿ ಅವಕಾಶ ನೀಡಿದ್ದೆವು ಆದರೆ ಅವರು ವೇದಿಕೆಗೆ ಬಂದು ನಮ್ಮೊಂದಿಗೆ ಚರ್ಚಿಸಲಿಲ್ಲ’ ಎಂದು ಆರೋಪಿಸಿದರು.

‘ ಬಾಕಿ ಇರುವುದನ್ನು ಕೇಳಲು ಹೋದರೆ ನಮ್ಮ ಮೇಲೆಯೇ ಕೇಸ್ ಮಾಡಲಾಗಿದೆ. ನಾವು ಹೆದರಿ ಓಡಿಹೋಗುವವರಲ್ಲ. ನಿಷೇಧಾಜ್ಞೆ ಇದ್ದಾಗಲೂ ನಾವು ಸಭೆ ಮಾಡಿದ್ದೇವೆ. ಆಗಲೇ ನಮ್ಮನ್ನ ಬಂಧಿಸಿಲ್ಲ. ರಾತ್ರಿ ಹೊತ್ತು ಯುವಕರ ಮನೆಗೆ ನುಗ್ಗುವುದು ಸರಿಯಲ್ಲ’ ಎಂದು ಪೊಲೀಸ್ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

’ಕಾರ್ಖಾನೆಯಲ್ಲಿರುವ ಗೂಂಡಾಗಳನ್ನು ಬಂಧಿಸಬೇಕು. ಸಾಯಿಪ್ರಿಯಾ ಕಾರ್ಖಾನೆಯಲ್ಲಿ ಬಡಿಗೆ ಹಿಡಿದುಕೊಂಡು ಇದ್ದವರನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಇಂದು ನಡೆದಿರುವ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಕಾರಣ ಎಂದು ಆರೋಪಿಸಿದರು.

ಶ್ರೀಶೈಲಗೌಡ ಪಾಟೀಲ, ಹಣಮಂತಗೌಡ ಸೋರಗಾವಿ, ಸುಭಾಷ ಶಿರಬೂರ, ದುಂಡಪ್ಪ ಯರಗಟ್ಟಿ, ಹಣಮಂತ ನಬಾಬ, ಮಹೇಶಗೌಡ ಪಾಟೀಲ, ರುದ್ರಪ್ಪ ಅಡವಿ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.