ADVERTISEMENT

ಮನೋಸ್ಥೈರ್ಯವೇ ಕೋವಿಡ್‌ಗೆ ಮದ್ದು: ಡಾ.ಸುಧೀರ್ ಬೆನಕಟ್ಟಿ ಅಭಿಮತ

ವೆಂಕಟೇಶ ಜಿ.ಎಚ್.
Published 20 ಜುಲೈ 2020, 19:30 IST
Last Updated 20 ಜುಲೈ 2020, 19:30 IST
ಡಾ.ಸುಧೀರ್ ಬೆನಕಟ್ಟಿ
ಡಾ.ಸುಧೀರ್ ಬೆನಕಟ್ಟಿ   

ಬಾಗಲಕೋಟೆ: ಮಧುಮೇಹ ಇದ್ದವರೂ ನಮ್ಮೊಂದಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಇದ್ದರು. ಅವರು ಗುಣಮುಖರಾಗಿ ಮನೆಗೆ ಹೋದರು. ಹೀಗಾಗಿ ಯಾರೂ ಅಂಜುವ ಅಗತ್ಯವಿಲ್ಲ. ಧೈರ್ಯ, ಮನೋಸ್ಥೈರ್ಯವೇ ಈ ಕಾಯಿಲೆಗೆ ಪರಿಣಾಮಕಾರಿ ಮದ್ದು.

ಇದು ಜಮಖಂಡಿಯ ವೈದ್ಯ ಡಾ.ಸುಧೀರ್ ವಿ.ಬೆನಕಟ್ಟಿ ಅವರ ಸಲಹೆ. ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತನಿಗೆ ಚಿಕಿತ್ಸೆ ನೀಡಿ, ಅವರ ಪ್ರಾಥಮಿಕ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಆಗಿದ್ದ ಇಬ್ಬರು ವೈದ್ಯರಲ್ಲಿ ಡಾ.ಸುಧೀರ್ ಒಬ್ಬರು. ಅವರು ಚಿಕಿತ್ಸೆ ಪಡೆದು ಆಸ್ಪ‍ತ್ರೆಯಿಂದ ಮರಳಿ ಈಗ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ನ್ಯುಮೊನಿಯಾ ಹಾಗೂ ಜ್ವರದಿಂದ ಬಳಲುತ್ತಿದ್ದ ವೃದ್ಧರೊಬ್ಬರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದೆವು. ಅಲ್ಲಿ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಅದು ಗೊತ್ತಾಗುತ್ತಿದ್ದಂತೆಯೇ ರೋಗಿಯ ಸಂಪರ್ಕಕ್ಕೆ ಬಂದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ತಪಾಸಣೆಗೊಳಪಡಿಸಲಾಯಿತು. ಈ ವೇಳೆ ಹಿರಿಯ ವೈದ್ಯರೊಬ್ಬರ ಜತೆಗೆ ನನಗೂ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಜುಲೈ 15ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದೆ. ನನಗೆ ಏನೂ ಆಗುವುದಿಲ್ಲ ಎಂಬ ಧೈರ್ಯವಿತ್ತು. ಜುಲೈ 12ರಂದು ನನ್ನ ಹುಟ್ಟಿದ ಹಬ್ಬ. ಅದೇ ದಿನ ಮೈಕೈನೋವು, ಜ್ವರ ಹಾಗೂ ಆಯಾಸವಿತ್ತು. ಆಗಲೇ ಅನುಮಾನವಿತ್ತು. ವಿಶೇಷವೆಂದರೆ ಕೋವಿಡ್ ಪಾಸಿಟಿವ್ ಫಲಿತಾಂಶ ಬಂದಾಗ ನನಗೆ ಜ್ವರ, ಆಯಾಸ ಏನೂ ಇರಲಿಲ್ಲ ಎಂದು ಡಾ.ಸುಧೀರ್ ನೆನಪಿಸಿಕೊಳ್ಳುತ್ತಾರೆ.

ADVERTISEMENT

ಅತ್ಯುತ್ತಮ ಆರೈಕೆ: ಜಿಲ್ಲಾ ಆಸ್ಪತ್ರೆಯ ವೈದ್ಯರು ಅತ್ಯುತ್ತಮವಾಗಿ ಕಾಳಜಿ ಮಾಡಿದರು. ಊಟೋಪಚಾರ ನೀಡಿದರು. ಚಿಕಿತ್ಸೆ ಅವಧಿಯಲ್ಲಿ ರೋಗದ ಯಾವ ಲಕ್ಷಣವೂ ಇರಲಿಲ್ಲ ಎನ್ನುತ್ತಾರೆ. ತಮಗೆ ಕೋವಿಡ್ ದೃಢಪಟ್ಟಾಗ ಬಾಗಲಕೋಟೆಯ ಹಿರಿಯ ಡಾ.ಆರ್.ಟಿ.ಪಾಟೀಲ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಕರೆ ಮಾಡಿ ಧೈರ್ಯ ತುಂಬಿದ್ದನ್ನು ಸ್ಮರಿಸಿಕೊಳ್ಳುತ್ತಾರೆ.

‘ಬೇರೆ ಬೇರೆ ಕಾಯಿಲೆಗಳಿಂದ ಗಂಭೀರ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರು ತುಸು ಎಚ್ಚರಿಕೆಯಿಂದ ಇರಬೇಕು. ಮೊದಲಿನಿಂದಲೂ ವ್ಯಾಯಾಮ, ದೈಹಿಕ ಶ್ರಮ ಮಾಡಿಕೊಂಡು ಆರೋಗ್ಯ ಚೆನ್ನಾಗಿಟ್ಟುಕೊಂಡಿರುವವರಿಗೆ ಇದು ತೊಂದರೆ ಮಾಡುವ ಕಾಯಿಲೆಯೇ ಅಲ್ಲ’ ಎಂದು ಡಾ.ಸುಧೀರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.