ADVERTISEMENT

ಕೋವಿಡ್–19 ಗುಣಮುಖ ತಾಯಿ–ಮಗು ಬಿಡುಗಡೆ

ನಮ್ಮಿಂದ ತೊಂದರೆ ಇಲ್ಲ ಎಂಬುದನ್ನು ಓಣಿಯವರಿಗೆ ಮನವರಿಕೆ ಮಾಡಿ; ವೈದ್ಯರಿಗೆ ಮಹಿಳೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 14:52 IST
Last Updated 18 ಜೂನ್ 2020, 14:52 IST

ಬಾಗಲಕೋಟೆ: ನಮಗೆ ಕೋವಿಡ್–19 ಗುಣಮುಖವಾಗಿದೆ. ನೆಗೆಟಿವ್ ಬಂದಿದೆ. ನಮ್ಮಿಂದ ಇನ್ನು ಯಾರಿಗೂ ತೊಂದರೆ ಇಲ್ಲ, ಎಲ್ಲರೂ ನಮ್ಮೊಂದಿಗೆ ಮಾತನಾಡುವಂತೆ ಓಣಿಯ ಎಲ್ಲರಿಗೂ ಹೇಳುವಂತೆ ಆಂಬುಲೆನ್ಸ್ ಅಣ್ಣನಿಗೆ (ಚಾಲಕ) ಹೇಳಿ..

ಇದು ಕೋವಿಡ್–19 ಸೋಂಕಿನಿಂದ ಗುಣಮುಖರಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಿಂದ ಗುರುವಾರ ಬಿಡುಗಡೆಯಾದ ಮಹಿಳೆ ಮನೆಗೆ ತೆರಳಲು ಆಂಬುಲೆನ್ಸ್ ಏರುವ ಮುನ್ನ ವೈದ್ಯರಿಗೆ ಮಾಡಿಕೊಂಡ ಮನವಿ.

ನಮಗೆ ಪಾಸಿಟಿವ್ ಆಗಿತ್ತು ಎಂದು ಮಗ್ಗುಲಿನ ಕಿರಾಣಿ ಅಂಗಡಿಯವರು ಸಾಮಗ್ರಿ ಸೇರಿದಂತೆ ನಮಗೆ ಏನೂ ಕೊಡೊಲ್ಲ. ನಮ್ಮ ಮನೆಯ ಮಾಲೀಕರಿಗೆ ಹೇಳಿ, ಓಣಿಯ ಎಲ್ಲರಿಗೂ ತಿಳಿಸಿ ಮನವರಿಕೆ ಮಾಡುವಂತೆ ಅವರು ಕೋರಿಕೊಂಡಾಗ ಆಕೆಯನ್ನು ಬೀಳ್ಕೊಡಲು ನಿಂತಿದ್ದ ವೈದ್ಯರು ಭಾವುಕರಾದರು. ಈ ವೇಳೆ ಡಾ.ಚಂದ್ರಕಾಂತ ಜವಳಿ ಮಹಿಳೆಯನ್ನು ಸಂತೈಸಿದರು. ’ಸ್ವಲ್ಪದಿನ ಅಕ್ಕಪಕ್ಕದವರಲ್ಲಿ ಆ ಭಾವನೆ ಇರುತ್ತದೆ. ನಂತರ ಹೋಗುತ್ತದೆ. ನೀವು ಎದೆಗುಂದಬೇಡಿ‘ ಎಂದು ಸಲಹೆ ಡಾ.ಜವಳಿ ಸಲಹೆ ನೀಡಿ ಕಳುಹಿಸಿಕೊಟ್ಟರು.

ADVERTISEMENT

ನವನಗರದ ಸೆಕ್ಟರ್ ನಂ 10ರ ನಿವಾಸಿಯಾದ ಮಹಿಳೆ ಮಹಾರಾಷ್ಟ್ರದಿಂದ ಮರಳಿದ್ದರು. ನಂತರ ಕ್ವಾರೆಂಟೈನ್‌ಗೆ ಒಳಗಾಗಿದ್ದರು. ಈ ವೇಳೆ ಪರೀಕ್ಷೆ ನಡೆಸಿದಾಗ ಮಹಿಳೆ ಹಾಗೂ ಆಕೆಯ ಒಂದು ವರ್ಷದ ಮಗುವಿಗೆ ಕೋವಿಡ್–19 ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಪಡೆದ ನಂತರ ತಾಯಿ–ಮಗು ಇಬ್ಬರೂ ಗುಣಮುಖರಾಗಿದ್ದಾರೆ.

ಇಬ್ಬರ ಬಿಡುಗಡೆಯೊಂದಿಗೆ ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ. 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.