ಗುಳೇದಗುಡ್ಡ: ತಾಲ್ಲೂಕಿನ ಆಸಂಗಿ, ಕಟಗಿನಹಳ್ಳಿ, ಲಾಯದಗುಂದಿ, ಸಬ್ಬಲಹುಣಸಿ, ನಾಗರಾಳ ಮಂಗಳಗುಡ್ಡ, ಚಿಮ್ಮಲಗಿ ಮುಂತಾದ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಐದುನೂರು ಎಕರೆಗೂ ಹೆಚ್ಚು ರಾಶಿ, ಶ್ರೀಕಾರ, ಶ್ರೀರಾಮ ಹಾಗೂ ತುಳಸಿ ಮುಂತಾದ ಸೀಡ್ಸ್ ಕಂಪನಿಯ ಹತ್ತಿ ಬೀಜಗಳನ್ನು ಬಿತ್ತಿದ್ದರು. ಈಗ ಆಳೆತ್ತರಕ್ಕೆ ಬೆಳೆದ ಬೆಳೆ ನಿರಂತರ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿದೆ.
ಇತ್ತೀಚಿಗೆ ಸುರಿದ ಮಳೆಯಿಂದ ಹೂವು ಉದರಿ ಕಾಯಿ ಕಡಿಮೆ ಆಗಿದೆ. ಅದರಲ್ಲಿ ಬೆಳೆದ ಹತ್ತಿ ಕಾಯಿ ಕೆಲವು ಜಮೀನುಗಳಲ್ಲಿ ಕೊಳೆತಿದೆ. ಇನ್ನು ಅಲ್ಪ ಸ್ವಲ್ಪ ಅರಳಿದ ಹತ್ತಿ ಮಳೆಯಿಂದ ನಾಶವಾಗಿದೆ. ಇಂದಿಗೂ ಆಗಾಗ ಮಳೆ ಆಗುತ್ತಿರುವುದರಿಂದ ಹತ್ತಿ ಬೆಳೆದ ರೈತ ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ಎದುರಾಗಿದೆ.
ಎಕರೆಗೆ 7ರಿಂದ 8 ಕ್ವಿಂಟಾಲ್ ಇಳುವರಿ ಬರುತ್ತಿತ್ತು ಈ ವರ್ಷ ಎಕರೆಗೆ 2ರಿಂದ 3 ಕ್ವಿಂಟಾಲ್ ಬೆಳೆ ಬರುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿ ವರ್ಷ 1 ಕ್ವಿಂಟಾಲ್‌ಗೆ ₹48 ಸಾವಿರ ಕಂಪನಿಯವರು ನೀಡುತ್ತಿದ್ದರು ಈ ವರ್ಷ ₹40 ರಿಂದ ₹42 ಸಾವಿರವನ್ನು ನಿಗದಿಪಡಿಸಿದ್ದಾರೆ.
ರೈತರು ಒಂದು ಎಕರೆಗೆ ಹತ್ತಿ ಬೆಳೆಯಎರಡು ಲಕ್ಷದವರೆಗೆ ಖರ್ಚು ಮಾಡಿರುವುದರಿಂದ ಹಾಕಿದ ಹಣ ಬರುವುದು ಕಷ್ಟವಾಗಿದೆ. ಬಿಸಿಲು ಇಲ್ಲದೆ ಹತ್ತಿ ಅರಳದೆ ಇರುವುದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ನಿರಂತರವಾಗಿ ಸುರಿದ ಮಳೆಯಿಂದ ಬೆಳೆದ ಹತ್ತಿ ಬೆಳೆ ಹಾಳಾಗಿದೆ ಇತ್ತ ಕಂಪನಿಯವರ ಸಹಕಾರ ಈ ವರ್ಷವೂ ಇಲ್ಲವಾಗಿದೆ ಎಂದು ಸಬ್ಬಲಹುಣಸಿ ಗ್ರಾಮದ ರೈತ ಯಲಗುರ್ದಗೌಡ ಗೌಡರ ಹೇಳುತ್ತಾರೆ.
ಮುಂಗಾರಿಗೆ ವಿವಿಧ ಬೆಳೆಗಳನ್ನು ಬೆಳೆಯಲು ರೈತರಿಗೆ ಅವಕಾಶವಿತ್ತು ಆದರೆ ಎಲ್ಲರೂ ಹೆಚ್ಚಾಗಿ ಹತ್ತಿಯನ್ನೆ ಬೆಳೆದುದ್ದರಿಂದ ಮತ್ತು ಮಳೆ ಅಧಿಕವಾದ್ದರಿಂದ ಸಮಸ್ಯೆ ಎದುರಾಗಿದೆ–ಆನಂದ ಗೌಡರ, ತಾಲ್ಲೂಕು ಕೃಷಿ ಅಧಿಕಾರಿ ಗುಳೇದಗುಡ್ಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.