ADVERTISEMENT

ದುಡಿಮೆ ಇಲ್ಲ: ಛಾಯಾಗ್ರಾಹಕರು ಕಂಗಾಲು

ಆರ್.ಎಸ್.ಹೊನಗೌಡ
Published 5 ಮೇ 2020, 2:26 IST
Last Updated 5 ಮೇ 2020, 2:26 IST
ಛಾಯಾಗ್ರಾಹಣದ ಕವಲು ಹಾದಿಯ ಬಿಂಬ
ಛಾಯಾಗ್ರಾಹಣದ ಕವಲು ಹಾದಿಯ ಬಿಂಬ   

ಜಮಖಂಡಿ: ಶುಭ ಸಮಾರಂಭಗಳ ಸ್ಮರಣೀಯ ಕ್ಷಣಗಳ ಸೆರೆ ಹಿಡಿದು ಎಲ್ಲರ ಮುಖದಲ್ಲೂ ನಗು ಅರಳಿಸುತ್ತಿದ್ದ ಛಾಯಾಗ್ರಾಹಕರ ಮುಖದ ಮೇಲಿನ ನಗು ಕೊರೊನಾ ಲಾಕ್‌ಡೌನ್‌ನಿಂದ ಮಾಯವಾಗಿದೆ. ನಿರ್ಬಂಧ ತೆರವಾದರೂ ಉದ್ಯೋಗ ಮಾತ್ರ ಸದ್ಯ ಪ್ರಾರಂಭವಾಗುವದಿಲ್ಲ ಎಂಬ ಆತಂಕ ಅವರಲ್ಲಿ ಮನೆಮಾಡಿದೆ.

ಜನವರಿಯಿಂದ ಜೂನ್ ತಿಂಗಳವರೆಗೆ ಆರು ತಿಂಗಳು ಛಾಯಾಗ್ರಾಹಕರಿಗೆ ಒಳ್ಳೆಯ ಸೀಸನ್ ಇರುತ್ತದೆ. ಆದರೆ ಕೊರೊನಾ ಲಾಕ್‌ಡೌನ್‌ನಿಂದ ಶುಭ ಕಾರ್ಯಗಳು ರದ್ದಾಗಿವೆ. ಇದು ಅವರ ಅನ್ನದ ಮಾರ್ಗಕ್ಕೆ ಪೆಟ್ಟು ಕೊಟ್ಟಿದೆ. ಜಮಖಂಡಿ ತಾಲ್ಲೂಕು ವೃತ್ತಿನಿರತ ಛಾಯಾಗ್ರಾಹಕರ ಸಂಘದಲ್ಲಿ 250 ಸದಸ್ಯರಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೇರಿದಂತೆ ಸುಮಾರು 120 ಸ್ಟುಡಿಯೊಗಳಿವೆ. 50 ಮಂದಿ ಮನೆಯಿಂದಲೇ ಆರ್ಡರ್ ತೆಗೆದುಕೊಂಡು ವ್ಯವಹಾರ ಮಾಡುತ್ತಾರೆ. ಈಗ ಎಲ್ಲರೂ ಸಂಕಷ್ಟದಲ್ಲಿದ್ದಾರೆ.

ಪ್ರತಿ ವರ್ಷ ಸೀಸನ್‌ನಲ್ಲಿ 20 ರಿಂದ 30 ಕಾರ್ಯಕ್ರಮ ಸಿಗುತ್ತಿದ್ದವು. ₹3 ರಿಂದ 4 ಲಕ್ಷ ವಹಿವಾಟು ಆಗುತ್ತಿತ್ತು. ಈ ಬಾರಿ ಬುಕ್ ಆಗಿದ್ದ ನಾಲ್ಕು ಮದುವೆಗಳು ರದ್ದಾಗಿವೆ. ಮತ್ತೆ ನಾವು ನವೆಂಬರ್, ಡಿಸೆಂಬರ್‌ವರೆಗೆ ಕಾಯಬೇಕು. ನಮ್ಮ ವರ್ಷದ ದುಡಿಮೆಗೆ ಈಗ ಕುತ್ತು ಬಂದಿದೆ' ಎಂದು ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಆಸ್ಕರ್ ಅಲಿ ಶೇಖ್ ಹೇಳುತ್ತಾರೆ.

ADVERTISEMENT

ಲಕ್ಷಾಂತರ ರೂಪಾಯಿ ಸಾಲ ಮಾಡಿ ಗುಣಮಟ್ಟದ ಕ್ಯಾಮೆರಾ ಖರೀದಿಸಿದ್ದೆವು. ಈಗ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮಗೆ ಸಾಲ ತೀರಿಸಲು ಸಮಯ ಕೊಡಬೇಕು. ಬಡ್ಡಿ ಕಡಿಮೆ ಮಾಡಬೇಕು ಎನ್ನುತ್ತಾರೆ.

ಈ ಬಾರಿಯ ದುಡಿಮೆ ಕೈತಪ್ಪಿ ಹೋಯಿತು. ಮನೆ ಬಾಡಿಗೆ, ಪೋಟೊ ಸ್ಟುಡಿಯೊ ಬಾಡಿಗೆ, ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಮನೆಯಲ್ಲಿ ದಿನಸಿ ಇಲ್ಲದ ಪರಿಸ್ಥಿತಿ ಬಂದಿದೆ. ಮದುವೆ ಆರ್ಡರ್ ತೆಗೆದುಕೊಂಡ ನಂತರ ಕೆಲಸಗಾರರಿಗೆ ಮುಂಗಡ ಹಣ ನೀಡುತ್ತಿದ್ದೆವು. ಈಗ ಕಾರ್ಯಕ್ರಮ ರದ್ದಾಗಿರುವುದರಿಂದ ಗ್ರಾಹಕರು ಕೊಟ್ಟ ಹಣ ಹಿಂದಿರುಗಿಸಲು ನಮ್ಮ ಬಳಿ ಹಣವೇ ಇಲ್ಲ‘ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.