ADVERTISEMENT

ಬಾಗಲಕೋಟೆ | ಬೆಳೆ ವಿಮೆ ನೋಂದಣಿಗೆ ಅಧಿಸೂಚನೆ

ಜಿಲ್ಲೆಗೆ ಬಜಾಜ್ ಅಲೈಯನ್ಸ್ ಜಿ.ಐ.ಸಿ ವಿಮಾ ಕಂಪನಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 13:21 IST
Last Updated 19 ಜೂನ್ 2020, 13:21 IST

ಬಾಗಲಕೋಟೆ: ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ನೋಂದಣಿ ಮಾಡಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಬೆಳೆಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದೆ. ಒಂದು ವೇಳೆ ಬೆಳೆಸಾಲ ಪಡೆದ ರೈತರು ಭಾಗವಹಿಸಲು ಇಚ್ಛೆಪಡದೇ ಇದ್ದಲ್ಲಿ, ಆ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ ಏಳು ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಬೆಳೆವಿಮೆ ಯೋಜನೆಯಿಂದ ಕೈಬಿಡಲಾಗುತ್ತದೆ.

ಬೆಳೆಸಾಲ ಪಡೆಯದ ರೈತರಿಗೆ ಬೆಳೆ ವಿಮೆ ಯೋಜನೆಯು ಐಚ್ಛಿಕವಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಬಜಾಜ್ ಅಲೈಯನ್ಸ್ ಜಿ.ಐ.ಸಿ ವಿಮಾ ಕಂಪನಿ ಆಯ್ಕೆಯಾಗಿದೆ. ಆಸಕ್ತ ರೈತರು ಕೊನೆಯ ದಿನಾಂಕದವರೆಗೆ ಕಾಯದೇ ಅಧಿಸೂಚಿತ ಬೆಳೆಗೆ ಹತ್ತಿರದ ಬ್ಯಾಂಕಿನಲ್ಲಿ ವಿಮಾ ಕಂತು ತುಂಬಿ ಬೆಳೆಗೆ ವಿಮೆ ಮಾಡಿಸಬೇಕು. ಮುಂಗಾರು ಹಂಗಾಮಿನಲ್ಲಿ ಆಹಾರ ಬೆಳೆಗಳಿಗೆ ಬೆಳೆ ವಿಸ್ತೀರ್ಣಕ್ಕೆ ತಕ್ಕಂತೆ ಬೆಳೆ ವಿಮಾ ಕಂತಿನ ಶೇಕಡಾ 2 ರಷ್ಟು ಹಾಗೂ ವಾಣಿಜ್ಯ ಬೆಳೆಗಳಿಗೆ ಬೆಳೆ ವಿಮಾ ಕಂತಿನ ಶೇಕಡಾ 5 ರಷ್ಟು ರೈತರು ಪಾವತಿಸಬೇಕಾಗಿರುತ್ತದೆ.

ADVERTISEMENT

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲ್ಲೂಕು ಕೃಷಿ ಕಚೇರಿಗಳಿಗೆ ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.