ADVERTISEMENT

ಕಾರ್ಪಸ್ ಫಂಡ್ ಆರಂಭಕ್ಕೆ ಕೇಂದ್ರಕ್ಕೆ ಪತ್ರ; ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:01 IST
Last Updated 23 ಜೂನ್ 2019, 20:01 IST

ಬಾಗಲಕೋಟೆ: ‘ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಸರಿಯಾದ ಸಮಯಕ್ಕೆ ಹಣ ಪಾವತಿಸಲು ಅನುಕೂಲವಾಗುವಂತೆ ಕಾರ್ಪಸ್ ಫಂಡ್ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವೆ’ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಆಸಕ್ತಿ ತೋರದಿದ್ದಲ್ಲಿ ರಾಜ್ಯ ಸರ್ಕಾರದಿಂದಲೇ ಫಂಡ್ ಆರಂಭಿಸಲು ಚಿಂತನೆ ನಡೆಸಲಾಗಿದೆ. ಆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.

‘ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ನೀತಿ (ಎಫ್‌ಆರ್‌ಪಿ) ಅಡಿ ಕಾರ್ಖಾನೆಗಳು ಕಬ್ಬು ಪೂರೈಸಿದ 14 ದಿನಗಳ ಒಳಗಾಗಿ ರೈತರಿಗೆ ದರ ಪಾವತಿಸಬೇಕಿದೆ. ಆದರೆ ಸಕ್ಕರೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಾರ್ಖಾನೆಗಳಿಗೆ ಕೋಟಾ ಪದ್ಧತಿ ನಿಗದಿಪಡಿಸಿದೆ. ತಿಂಗಳಿಗೆ ಇಷ್ಟುಸಕ್ಕರೆ ಮಾರಾಟ ಮಾಡಬೇಕಿರುವುದರಿಂದ ಒಮ್ಮೆಲೆ ರೈತರಿಗೆ ದರ ಪಾವತಿ ಮಾಡುವುದು ಕಷ್ಟವಾಗಲಿದೆ. ಹಾಗಾಗಿ ಆಯಾ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಸಕ್ಕರೆ ಪ್ರಮಾಣ ಅವಲಂಬಿಸಿಬ್ಯಾಂಕ್ ಖಾತರಿ ಪಡೆದು ಕಾರ್ಪಸ್ ಫಂಡ್ ಮೂಲಕ ಕಬ್ಬಿನ ಬಾಕಿ ಪಾವತಿಗೆ ಹಣ ನೀಡಬಹುದಾಗಿದೆ. ಇದರಿಂದ ಬೆಳೆಗಾರರಿಗೆ ಸಮಯಕ್ಕೆ ಸರಿಯಾಗಿ ಹಣ ದೊರೆಯಲಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.