ಇಳಕಲ್: ಸೈಬರ್ ವಂಚನೆಗಳ ಬಗ್ಗೆ ಜಾಗೃತಿ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಅರಿವು ಹೊಂದಿರುವುದು ಅತ್ಯಗತ್ಯ ಎಂದು ಇಳಕಲ್ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ ಹೇಳಿದರು.
ಇಲ್ಲಿಯ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದ ಪೌರತ್ವ ತರಬೇತಿ ಶಿಬಿರದಲ್ಲಿ ಸೈಬರ್ ಅಪರಾಧ, ವಂಚನೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಅವರು ಮಾತನಾಡಿದರು.
‘ಯುವಕರನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆ, ಪಾಲಕರು ಹಾಗೂ ಸಮಾಜದ ಮೇಲಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಸುರಕ್ಷತೆ, ರಸ್ತೆ ಸುರಕ್ಷತೆ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕಿದೆ’ ಎಂದು ಪಿಎಸ್ಐ ಮಂಜುನಾಥ ಪಾಟೀಲ ಹೇಳಿದರು.
ಎಸ್.ವಿ.ಎಂ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಸಂಧ್ಯಾ ಎಚ್.ವಿ ಅವರು ಕಾನೂನು ಅರಿವು-ನೆರವು ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಬಿ.ಇಡಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕಿರಣ ಬಿಜ್ಜಲ್ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯೆ ರಾಖಿ ಪೆಡ್ನೇಕರ್, ಪ್ರಾಧ್ಯಾಪಕರು, ಪ್ರಶಿಕ್ಷಣಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.