
ರಬಕವಿ ಬನಹಟ್ಟಿ: ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸುವ ಹಬ್ಬಗಳು ವಿಶೇಷವಾಗಿರುತ್ತವೆ. ಅವುಗಳಿಗೆ ತಮ್ಮದೆ ಆದ ಮಹತ್ವವಿದೆ. ಅಂಥ ಒಂದು ಸಂಪ್ರದಾಯ ದೀಪಾವಳಿಯ ಸಂದರ್ಭದಲ್ಲಿ ಪಾಂಡವರನ್ನು ಪೂಜಿಸುವ ಪದ್ಧತಿ ಹಿಂದಿನ ಕಾಲದಿಂದಲೂ ನಡೆದುಕೊಂಡ ಬಂದಿದ್ದು, ಈಗಲೂ ನಮ್ಮ ಗ್ರಾಮೀಣ ಪ್ರದೇಶದ ಜನರು ದನಕರುಗಳ ಶಗಣೆಯಿಂದ ನಿರ್ಮಾಣ ಮಾಡಿದ ಪಾಂಡವರನ್ನು ಪೂಜಿಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ.
ಪಂಚರು ರಕ್ಷಣೆಯ ಸಂಕೇತ. ಪಾಂಡವರು ಕೂಡಾ ಸತ್ಯ ಮತ್ತು ಧರ್ಮದ ಸಂಕೇತವಾಗಿರುವುದರಿಂದ ದೀಪಾವಳಿಯ ಸಂದರ್ಭದಲ್ಲಿ ಪಾಂಡವರನ್ನು ಪೂಜಿಸುತ್ತಾರೆ.
ದೀಪಾವಳಿಯ ಮೊದಲ ದಿನ ಐದು, ಎರಡನೆಯ ದಿನ ಒಂಭತ್ತು ಮತ್ತು ಮೂರನೆಯ ದಿನದಂದು ಹನ್ನೊಂದು ಜನ ಪಾಂಡವರನ್ನು ಹಾಕುತ್ತಾರೆ. ನಂತರ ಪಾಂಡವರ ಮುಂದೆ ಶೆಗಣಿಯ ಕುಡಿಕೆಗಳನ್ನು ಮಾಡಿ ಅವುಗಳಲ್ಲಿ ಮೊಸರು ಮತ್ತು ಜೋಳಗಳನ್ನು ಹಾಕುತ್ತಾರೆ.
ಕೊನೆಯ ದಿನದಂದು ಜನರು ಪಾಂಡವರನ್ನು ಪೂಜಿಸಿ ಪಾಂಡವರ ಬದಿಗೆ ಮುತ್ತೈದೆಯನ್ನು ಕೂಡ್ರಿಸಿ ಉಡಿ ತುಂಬುತ್ತಾರೆ. ಸೂರ್ಯ ಮುಳಗುವ ಹೊತ್ತಿಗೆ ಮತ್ತೊಮ್ಮೆ ಪೂಜೆ ಮಾಡಿ ಮನೆಯ ಮಾಳಿಗೆಯ ಮೇಲೆ ಇಡುತ್ತಾರೆ. ಪ್ರತಿದಿನ ಮನೆಯಲ್ಲಿ ಮಾಡಲಾದ ಸಿಹಿ ಅಡುಗೆಯನ್ನು ನೈವೇದ್ಯವಾಗಿ ಸಲ್ಲಿಸುತ್ತಾರೆ.
’ಇಂಥ ಆಚರಣೆಗಳು ಈಗಲೂ ಉಳಿದುಕೊಂಡು ಬಂದಿರುವುದು ವಿಶೇಷವಾಗಿದೆ. ನಾವು ಮೂಢ ನಂಬಿಕೆಗಳನ್ನು ಅಳಿಸಬೇಕು ಆದರೆ ಮೂಲ ನಂಬಿಕೆಗಳನ್ನು ಉಳಿಸಿಕೊಳ್ಳಬೇಕಾಗಿದೆ’ ಎಂದು ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.