ಬಾಗಲಕೋಟೆ: ‘ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿರುವ ಮೌಲ್ಯ ಹಾಗೂ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ಆಗಬೇಕಿದೆ’ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಂವಿಧಾನದಲ್ಲಿರುವ ಮೌಲ್ಯಗಳಿಗೆ ಒತ್ತುಕೊಟ್ಟು ಜೀವನ ಸಾಗಿಸುವ ಉದ್ದೇಶದಿಂದ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ನಮ್ಮದಾಗಿದೆ’ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ, ‘ದೇಶಕ್ಕೆ ಅಂಬೇಡ್ಕರ್ ನೀಡಿರುವ ಮಹಾನ್ ಕೊಡುಗೆ ಸಂವಿಧಾನ. ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಟ್ಟಿದೆ. ಹಕ್ಕುಗಳ ಬಗ್ಗೆ ಮಾತನಾಡುತ್ತೇವೆಯೇ ಹೊರತು, ಕರ್ತವ್ಯದ ಬಗ್ಗೆ ಮಾತನಾಡುತ್ತಿಲ್ಲ. ಕರ್ತವ್ಯ ನಿರ್ವಹಿಸಿದಾಗಲೇ ಹಕ್ಕುಗಳು ದೊರೆಯುತ್ತವೆ’ ಎಂದು ಹೇಳಿದರು.
ಶಾಸಕ ಎಚ್.ವೈ. ಮೇಟಿ ಮಾತನಾಡಿ, ‘ಸಂವಿಧಾನದ ಆಶಯ, ಅದರ ಹಿಂದೆ ಇರುವ ಸಮಾಜಿಕ ಕಳಕಳಿ, ಸಮಾನತೆ, ಭಾತೃತ್ವ ಸೇರಿದಂತೆ ಎಲ್ಲ ಮೌಲ್ಯಗಳನ್ನು ನಾವೆಲ್ಲರೂ ಅನುಸರಿಬೇಕು’ ಎಂದರು.
ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಂಪತ್ ಲಮಾಣಿ ಮಾತನಾಡಿ, ಪ್ರಜಾಪ್ರಭುತ್ವ ಒಂದು ಜೀವನದ ಶೈಲಿಯಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಬುಡಾ ಅಧ್ಯಕ್ಷ ರಜಾಕ್ ಬೇನೂರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಇದ್ದರು. ಪ್ರಾರಂಭದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು.
ಸೈಕಲ್ ಜಾಥಾ ಮ್ಯಾರಥಾನ್‍ಗೆ ಚಾಲನೆ
ಬಾಗಲಕೋಟೆ: ಪ್ರಜಾಪ್ರಭುತ್ವ ದಿನ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಹಾಗೂ ಮ್ಯಾರಥಾನ್‍ಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯ್ ಚಾಲನೆ ನೀಡಿದರು. ಸೈಕಲ್ ಜಾಥಾ ಕಾಳಿದಾಸ ಶಿಕ್ಷಣ ಸಂಸ್ಥೆಯ ಮೈದಾನದಿಂದ ಪ್ರಾರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯಗೊಂಡಿತು. ಮ್ಯಾರಥಾನ್ ಕಾಳಿದಾಸ ಶಿಕ್ಷಣ ಸಂಸ್ಥೆಯಿಂದ ಪ್ರಾರಂಭವಾಗಿ ವಿದ್ಯಾಗಿರಿ ಸರ್ಕಲ್ ಮಾರ್ಗವಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಲ್ಲಿ ಮುಕ್ತಾಯಗೊಂಡಿತು. ‘ನನ್ನ ಮತ ನನ್ನ ಹಕ್ಕು’ ಘೋಷವಾಕ್ಯದ ಫಲಕಗಳನ್ನು ಪ್ರದರ್ಶಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.