ADVERTISEMENT

ಬಾಗಲಕೋಟೆ: ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರಕರ ವಿರುದ್ಧ ಕ್ರಮಕ್ಕೆ ಆಗ್ರಹ

ಧರ್ಮಸ್ಥಳ ಭಕ್ತಾಭಿಮಾನಿಗಳ ಸಮಿತಿ ಸದಸ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 4:22 IST
Last Updated 14 ಆಗಸ್ಟ್ 2025, 4:22 IST
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ಬಾಗಲಕೋಟೆಯಲ್ಲಿ ಧರ್ಮಸ್ಥಳ ಭಕ್ತಾಭಿಮಾನಿಗಳ ಸಮಿತಿ ಸದಸ್ಯರು ಪ್ರತಿಭಟನೆ ಮಾಡಿದರು
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ಬಾಗಲಕೋಟೆಯಲ್ಲಿ ಧರ್ಮಸ್ಥಳ ಭಕ್ತಾಭಿಮಾನಿಗಳ ಸಮಿತಿ ಸದಸ್ಯರು ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಅವರುಗಳನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಬೇಕು ಎಂದು ಧರ್ಮಸ್ಥಳ ಭಕ್ತಾಭಿಮಾನಿಗಳ ಸಮಿತಿ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದರು.

ಬಾಬು ಜಗಜೀವನರಾಮ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ಬಂದ ಪ್ರತಿಭಟನಾಕಾರರು, ಸುಳ್ಳು ಪ್ರಚಾರ ನಡೆಸುತ್ತಿರುವವರ ವಿರುದ್ಧ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರದ ಕೆಲಸ ನಡೆಯುತ್ತಿದೆ. ಧರ್ಮಸ್ಥಳದ ವಿರುದ್ಧ ಮಾತ್ರ ನಡೆಯುತ್ತದೆ ಅಂತಲ್ಲ. ಶತ, ಶತಮಾನಗಳಿಂದ ಅಯೋಧ್ಯೆಯಿಂದ ಹಿಡಿದು ವಿವಿಧೆಡೆ ಇದೇ ನಡೆದುಕೊಂಡು ಬಂದಿದೆ. ಅಪಪ್ರಚಾರವನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಕೇಂದ್ರದಲ್ಲಿ ಹಿಂದೂ ಧರ್ಮ ರಕ್ಷಣೆಯ ಸರ್ಕಾರವಿದೆ. ಮಾಸ್ಕ್‌ ಹಾಕಿಕೊಂಡವನ ಮಾತು ಕೇಳಿ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದೇಕೆ? ಅವನು ಹೇಳಿದ 16 ಕಡೆಗಳಲ್ಲಿ ಹಲವಾರು ದಿನಗಳಲ್ಲಿ ಅಗೆಯಲಾಗುತ್ತಿದೆ. ಒಂದು ಕಡೆ ಮಾತ್ರ ಬುರುಡೆ ಸಿಕ್ಕಿದೆ. ಅದು ಪುರುಷನದ್ದು ಎಂದು ಗೊತ್ತಾಗಿದೆ. ಅಂತಹವರ ಮಾತು ಕೇಳಿಕೊಂಡು ಸರ್ಕಾರ ಕ್ರಮಕೈಗೊಂಡಿರುವುದು ಸರಿಯಲ್ಲ ಎಂದರು.

ಧರ್ಮಸ್ಥಳ ಜಾತಿ, ಮತ, ಪಂಥ ಮೀರಿ ಬೆಳೆದಿದೆ. ರಾಜ್ಯದ ಎಲ್ಲೆಡೆಯಿಂದ ಜನರು ಹೋಗುತ್ತಾರೆ. ಅಲ್ಲಿಗೆ ಹೋಗದವರು ಅಪಪ್ರಚಾರ ಮಾಡುತ್ತಿದ್ದಾರೆ. ಜನರು ಇಂತಹ ಅಪಪ್ರಚಾರಕ್ಕೆ ಕಿವಿಗೊಡುವುದಿಲ್ಲ ಎಂದು ಹೇಳಿದರು.

ರಾಜು ನಾಯ್ಕರ ಮಾತನಾಡಿ, ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಮಂಜುನಾಥ ಸ್ವಾಮಿ ದೇವಾಲಯ ಹಾಗೂ ವಿರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ತನಿಖೆ ಆರಂಭವಾಗಿದೆ. ಅದರ ವರದಿ ಬರುವವರೆಗೆ ಕಾಯುವ ವ್ಯವಧಾನವೂ ಇವರಿಲ್ಲ. ಅಪಪ್ರಚಾರ ನಡೆಸಿರುವವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಬಸವರಾಜ ಯಂಕಂಚಿ, ಡಾ.ಎಂ.ಎಸ್‌. ದಡ್ಡೇನವರ, ಜಿ.ಎನ್‌. ಪಾಟೀಲ,  ಶ್ರೀಕಾಂತ ಸಂಧಿಮನಿ, ರಂಗನೌಡ ದಂಡನ್ನವರ, ಶ್ರೀಶೈಲಗೌಡ ಪಾಟೀಲ,  ಗೀತಾ ನಲವತ್ತವಾಡ ಮತ್ತಿತರರು ಪಾಲ್ಗೊಂಡಿದ್ದರು.

ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಉತ್ತರ ಕರ್ನಾಟಕದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ನಡೆದುಕೊಳ್ಳುತ್ತಾರೆ. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗುತ್ತಿದೆ
–ವೀರಣ್ಣ ಚರಂತಿಮಠ, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.