ಹುನಗುಂದ: ರೈತರು ಬೀಜೋಪಚಾರದಲ್ಲಿ ಟ್ರೈಕೋಡರ್ಮ ಬಳಸುವುದರಿಂದ ಬೆಳೆಗಳಲ್ಲಿ ಕೀಟ ಬಾಧೆ ಮತ್ತು ರೋಗ ನಿಯಂತ್ರಿಸಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಅಂಟರದಾನಿ ಹೇಳಿದರು.
ಪಟ್ಟಣದ ಎಪಿಎಂಸಿ ಅವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತ ಸಮುದಾಯ ಬಿತ್ತನೆ ಬೀಜಗಳಲ್ಲಿ ಟ್ರೈಕೋಡರ್ಮ ಸೇರಿದಂತೆ ಇತರೆ ಲಘು ಪೋಷಕಾಂಶಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದರ ಜೊತೆಗೆ ಬೆಳೆಗಳಿಗೆ ಬೆಳೆವಣಿಗೆಗೆ ಪೂರಕ ಜೀವಾಣುಗಳು ಉತ್ಪತ್ತಿಗೊಳ್ಳುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಇಲಾಖೆಯಲ್ಲಿ ಮುಂಗಾರು ಹಂಗಾಮಿಗೆ ಬೇಕಾಗುವ ಎಲ್ಲ ಬೀಜಗಳು ಲಭ್ಯವಿದೆ ಎಂದರು.
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಂಜೀವ ಜೋಶಿ ಮಾತನಾಡಿ, ರಾಜ್ಯ ಸರ್ಕಾರ ಕೃಷಿ ಇಲಾಖೆ ಮೂಲಕ ರಿಯಾಯ್ತಿ ದರದಲ್ಲಿ ವಿವಿಧ ಬೀಜಗಳನ್ನು ವಿತರಿಸುತ್ತದೆ. ರೈತರು ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ವಿವಿಧ ತಳಿಯ ಬೆಳೆಗಳ ಬೀಜಗಳು ಲಭ್ಯವಿದ್ದು, ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೃಷಿ ಇಲಾಖೆ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಬೀಜೋಪಚಾರ ಕುರಿತು ಮಾಹಿತಿ ನೀಡಿದರು.
ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಪ್ರಭು ಇದ್ದಲಗಿ, ಕೃಷ್ಣ ಜಾಲಿಹಾಳ, ಬಸವರಾಜ ಹೊಸಮನಿ, ಸಂಗಪ್ಪ ಹೂಲಗೇರಿ, ವಿಜಯ ಮಹಾಂತೇಶ ಮಲಗಿಹಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಾಘವೇಂದ್ರ ಕೊಂಡಗುರಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.