ADVERTISEMENT

ಲಾಕ್‌ಡೌನ್‌ ಸಮಯದಲ್ಲಿ ಆಹಾರ ಸಿಗದೇ ಕಂಗಾಲು: ಬೀದಿ ನಾಯಿಗಳ ವರಾಹ ಬೇಟೆ!

ಲಾಕ್‌ಡೌನ್: ಆಹಾರಕ್ಕಾಗಿ ಹೆಚ್ಚಿದ ಶ್ವಾನಗಳ ಹಾವಳಿ

​ಪ್ರಜಾವಾಣಿ ವಾರ್ತೆ
Published 9 ಮೇ 2020, 12:25 IST
Last Updated 9 ಮೇ 2020, 12:25 IST
ಬಾಗಲಕೋಟೆಯ ನಗರಸಭೆ ಎದುರು ಮುಂಜಾನೆಯೇ ನಾಯಿಗೆ ಆಹಾರದವಾದ ಹಂದಿ ಮರಿಚಿತ್ರ: ಇಂದ್ರಕುಮಾರ ದಸ್ತೇನವರ
ಬಾಗಲಕೋಟೆಯ ನಗರಸಭೆ ಎದುರು ಮುಂಜಾನೆಯೇ ನಾಯಿಗೆ ಆಹಾರದವಾದ ಹಂದಿ ಮರಿಚಿತ್ರ: ಇಂದ್ರಕುಮಾರ ದಸ್ತೇನವರ   

ಬಾಗಲಕೋಟೆ: ಕೋವಿಡ್– 19 ಲಾಕ್‌ಡೌನ್ ಪರಿಣಾಮ ಹೋಟೆಲ್ ಹಾಗೂ ಬೀದಿ ಬದಿಯ ತಿನಿಸಿನ ಅಂಗಡಿಗಳು ಬಂದ್ ಆಗಿವೆ. ಹೀಗಾಗಿ ಆಹಾರ ಸಿಗದೇ ಕಂಗಾಲಾಗಿರುವ ಬೀದಿ ನಾಯಿಗಳು ಹಂದಿ ಹಾಗೂ ಬಿಡಾಡಿ ದನ– ಕರುಗಳ ಮೇಲೆ ದಾಳಿ ಆರಂಭಿಸಿವೆ.

ಅರಾಮವಾಗಿ ಅಡ್ಡಾಡಿಕೊಂಡಿದ್ದ ವರಾಹಗಳು ಶ್ವಾನ ಪಡೆಯ ದಾಳಿಗೆ ಕಂಗೆಟ್ಟಿವೆ. ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ತಲೆದೋರಿದೆ. ಅದರಲ್ಲೂ ಹೊಂಚಿ ಹಾಕಿ ಕೂರುವ ನಾಯಿಗಳು ಗುಂಪಿನಿಂದ ಬೇರ್ಪಟ್ಟ ಹಂದಿ ಮರಿಗಳನ್ನು ಕಚ್ಚಿಕೊಂಡು ಓಡುವುದು ಸಾಮಾನ್ಯವಾಗಿದೆ.

ಹೋಟೆಲ್, ರಸ್ತೆ ಬದಿಯ ತಿನಿಸಿನ ಅಂಗಡಿಗಳ ಮುಸುರೆ, ಉಳಿದ ಆಹಾರ ಬೀದಿ ನಾಯಿಗಳಿಗೆ ಆಹಾರದ ಮೂಲವಾಗಿತ್ತು. ಈಗ ಅವು ಬಾಗಿಲು ಮುಚ್ಚಿವೆ. ಬೇಸಿಗೆಯ ಕಾರಣ ಕುಡಿಯಲು ನೀರು ಸಿಗುವುದು ಕಷ್ಟವಾಗಿದೆ. ಹೀಗಾಗಿ ಹಸಿವು ನೀಗಿಸಿಕೊಳ್ಳಲು ಅವು ಹಂದಿಗಳ ಮೇಲೆ ದಾಳಿ ಆರಂಭಿಸಿವೆ. ಬಿಡಾಡಿ ದನಗಳ ಹಿಂಡಿನಲ್ಲಿ ಅಡ್ಡಾಡುವ ಕರುಗಳು ಕೂಡ ನಾಯಿಗಳ ದಾಳಿಗೆ ತುತ್ತಾಗುತ್ತಿವೆ. ಇತ್ತೀಚೆಗೆ ನವನಗರದ 10ನೇ ಸೆಕ್ಟರ್‌ನಲ್ಲಿ ಎರಡು ಕರುಗಳು ನಾಯಿಗಳ ಹಿಂಡಿನ ದಾಳಿಗೆ ಸಿಲುಕಿ ಸಾವನ್ನಪ್ಪಿವೆ.

ADVERTISEMENT

ಲಾಕ್‌ಡೌನ್ ಮುಗಿಯುವ ವೇಳೆಗೆ ವರಾಹ ಸಂತತಿಯನ್ನೇ ಬೀದಿ ನಾಯಿಗಳು ಮುಗಿಸಿಬಿಡಬಹುದು. ಹೋಟೆಲ್, ಬೇಕರಿ, ಬೀದಿ ಬದಿ ವ್ಯಾಪಾರಸ್ಥರು ಬಾಗಿಲು ಹಾಕಿರುವುದು ಹಂದಿಗಳಿಗೂ ಆಹಾರವಿಲ್ಲದಂತಾಗಿದೆ. ಹೀಗಾಗಿ ಅವು ಬಡಕಲಾಗಿವೆ. ಈಗ ನಾಯಿಗಳಿಗೆ ಅವೇ ಆಹಾರವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.