ಅಂಕೋಲಾ: ಕೇಣಿಯಲ್ಲಿ ನಿರ್ಮಾಣ ಮಾಡಲು ಹೊರಟಿರುವ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರು ನಿರ್ಮಾಣ ವಿರುದ್ಧದ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ, ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಹೇಳಿದರು.
ತಾಲ್ಲೂಕಿನ ಕೇಣಿಯಲ್ಲಿ ಉದ್ಯಾನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ಮೀನುಗಾರರೊಂದಿಗೆ ಚರ್ಚಿಸಿ ಬಳಿಕ ಮನವಿ ಸ್ವೀಕರಿಸಿ ಮಾತನಾಡಿದರು.
ಈ ಬಗ್ಗೆ ಕಲಾಪದ ಶೂನ್ಯ ವೇಳೆಯಲ್ಲಿ ಈ ಕುರಿತು ಚರ್ಚಿಸಿದ್ದೇನೆ. ಬೆಲೇಕೇರಿಯಲ್ಲಿ ಈಗಾಗಲೇ ವಾಣಿಜ್ಯ ಬಂದರಿದ್ದು,ಅದನ್ನು ಅಭಿವೃದ್ಧಿ ಪಡಿಸುವ ಬದಲು ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಹೊರಟಿದ್ದು ಸೂಕ್ತವಲ್ಲ. ನೂರಾರು ಮೀನುಗಾರ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ಎದುರಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ರಾಜೇಂದ್ರ ನಾಯ್ಕ ಮಾತನಾಡಿ, ಖಾಸಗಿ ಕಂಪನಿಯವರು ವಾಣಿಜ್ಯ ಬಂದರು ನಿರ್ಮಾಣ ಮಾಡಲು ಹೊರಟಿದ್ದು, ಇದರಿಂದ ಸ್ಥಳೀಯ ಮೀನುಗಾರರಿಗೆ ಹಾಗೂ ಇತರ ಸಮುದಾಯದ ಜನರಿಗೆ ಬಹಳ ತೊಂದರೆ ಉಂಟಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ವಾಣಿಜ್ಯ ಬಂದರು ನಿರ್ಮಾಣ ಬೇಡ ಎಂದು ಎಂಎಲ್ಸಿ ಅವರಲ್ಲಿ ವಿನಂತಿಸಿದರು.
ಸಂಜೀವ ಬಲೆಗಾರ, ಶ್ರೀಕಾಂತ್ ದುರ್ಗೇಕರ್, ವಿ.ಎನ್.ನಾಯಕ, ಸಂಜಯ್ ನಾಯ್ಕ, ರಾಜೇಶ್ವರಿ ಕೇಣಿಕರ್, ನಿಲೇಶ್ ಹರಿಕಂತ್ರ, ಶೇಖರ್ ಹರಿಕಂತ್ರ, ಸೂರಜ್ ಹರಿಕಂತ್ರ, ಕುಮಾರ್ ಹರಿಕಂತ್ರ ಹಾಗೂ ಹೋರಾಟ ಸಮಿತಿಯ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.