ADVERTISEMENT

ಮತದಾರರ ಪಟ್ಟಿಯಲ್ಲಿ ಎರಡೆರಡು ಬಾರಿ 7,272 ಜನರ ಹೆಸರು: ಪರಿಶೀಲಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 5:42 IST
Last Updated 4 ಫೆಬ್ರುವರಿ 2026, 5:42 IST

ಬಾಗಲಕೋಟೆ: ಮತದಾರರ ಪಟ್ಟಿಯಲ್ಲಿ 7,272 ಜನರ ಹೆಸರು ಎರಡು ಮತ್ತು ಎರಡಕ್ಕಿಂತ ಹೆಚ್ಚು ಸಲ ಇರುವುದು ಕಂಡು ಬಂದಿದೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದಾಖಲೆ ಸಲ್ಲಿಸಲಾಗಿದೆ. ಸರಿಯಾಗಿ ಪರಿಶೀಲನೆ ನಡೆಸಬೇಕು ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆಗ್ರಹಿಸಿದರು

ಮಂಗಳವಾರ ಸುದ್ದುಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಎರಡು ಮತ್ತು ಎರಡಕ್ಕಿಂತ ಹೆಚ್ಚು ಸಲ ಹೆಸರು ಇರುವ ಬಗ್ಗೆ ಪಟ್ಟಿ ಪ್ರದರ್ಶಿಸಿದ ಅವರು, ಸರಿಯಾಗಿ ಪರಿಶೀಲನೆ ಮಾಡಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ಕಾಲೇಜಿನ ವಸತಿ ನಿಲಯದ ವಿದ್ಯಾರ್ಥಿಗಳ ಹೆಸರು ಸೇರ್ಪಡೆ ಮಾಡಿಕೊಂಡಿರುವುದರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಚುನಾವಣಾ ಆಯೋಗದ ಪ್ರಕಾರವೇ ಸೇರ್ಪಡೆಯಾಗಿದ್ದಾರೆ. ಇದನ್ನು ತಿಳಿದುಕೊಂಡು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು. 

ADVERTISEMENT

ಒಂದೇ ಮತಗಟ್ಟೆಯಲ್ಲಿ ಹಲವಾರು ವಸತಿ ನಿಲಯಗಳಿರುವುದರಿಂದ ಒಂದೇ ಕೊಠಡಿಯ ಸಂಖ್ಯೆ ಬಂದಿರುತ್ತದೆ. ಮತಗಟ್ಟೆ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವುದೇ ಲೋಪ ಕಂಡು ಬಂದಿಲ್ಲ ಎಂದರು.

ಚುನಾವಣೆ ಆಯೋಗ ಹಾಗೂ ಯುಜಿಸಿ ಸುತ್ತೋಲೆ ಪ್ರಕಾರ ಅಧ್ಯಯನ ಮಾಡುವ ಸ್ಥಳದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬಹುದಾಗಿದೆ. ಪ್ರತಿ ಸಲ ಚುನಾವಣೆ ಬಂದಾಗಲೂ ಆರೋಪ ಮಾಡುವುದು ಕೆಲವರಿಗೆ ಉದ್ಯೋಗವಾಗಿದೆ. ವಿದ್ಯಾರ್ಥಿಗಳ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ, ಜನರಿಗೆ ತಪ್ಪು ಸಂದೇಶ ನೀಡುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಪರ್ಕದಲ್ಲಿದ್ದಾರೆ:

ಬಿಜೆಪಿ ತೊರೆದು ಬೇರೆ ಪಕ್ಷಗಳಿಗೆ ಹೋಗಿರುವ ಪಕ್ಷದ ಅನೇಕ ಕಾರ್ಯಕರ್ತರು, ಪ್ರಮುಖರು ಸಂಪರ್ಕದಲ್ಲಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಕ್ಷಕ್ಕೆ ಹಲವರು ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದರು. ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ ಎನ್ನುವ ಪ್ರಶ್ನೆಗೆ, ಹೌದು ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇರಲ್ಲ. ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಆಕಾಂಕ್ಷಿ ಎಂದು ಪ್ರಚಾರ ಪಡೆಯುವವರು ಇರುತ್ತಾರೆ. ಚುನಾವಣೆಗೆ ಅಭ್ಯರ್ಥಿ ಯಾರು ಎಂದು ಘೋಷಣೆ ಆಗಿಲ್ಲ. ರಾಜ್ಯ ಕೋರ್ ಕಮೀಟಿ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರವೇ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರಲ್ಲ ಎಂಬ ಪ್ರಶ್ನೆಗೆ, ನಮ್ಮಲ್ಲೂ ಕೇಂದ್ರದ ಸಚಿವರು, ರಾಜ್ಯದ ಮುಖಂಡರು ಇದ್ದಾರೆ. ಅವರೆಲ್ಲರೂ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ಪಕ್ಷಕ್ಕೆ ಒಳ್ಳೆಯ ವಾತಾವರಣವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.