ADVERTISEMENT

ಆಸ್ತಿಗಾಗಿ ವೃದ್ಧೆ ಕೊಲೆ: ಸಂಬಂಧಿಕರೇ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:39 IST
Last Updated 16 ಜನವರಿ 2026, 7:39 IST
ಚಂದ್ರವ್ವ ನಿಲಜಗಿ
ಚಂದ್ರವ್ವ ನಿಲಜಗಿ   

ರಬಕವಿ ಬನಹಟ್ಟಿ: ಆಸ್ತಿಗಾಗಿ ಜಗದಾಳ ಗ್ರಾಮದ ಚಂದ್ರವ್ವ ನಿಲಜಗಿ (80) ಅವರನ್ನು ಮಂಗಳವಾರ ಕೊಲೆ ಮಾಡಲಾಗಿದೆ.

ಮೃತ ಚಂದ್ರವ್ವ ಸಹೋದರನ ಮಕ್ಕಳಾದ ಜಗದಾಳ ಗ್ರಾಮದ ಪರಪ್ಪ ನಿಲಜಗಿ, ಸದಾಶಿವ ನಿಲಜಗಿ, ಸಿದ್ದಪ್ಪ ನಿಜಲಗಿ ಮತ್ತು ಶಂಕ್ರಪ್ಪ ನಿಲಜಗಿ ವೃದ್ಧೆ ಚಂದ್ರವ್ವ ಅವರನ್ನು ಕೊಲೆ ಮಾಡಿದ ಆರೋಪಿಗಳಾಗಿದ್ದು, ಅವರನ್ನು ಬಂಧಿಸಲಾಗಿದೆ.

ಕೊಲೆಯಾದ ಚಂದ್ರವ್ವ ಮೂವತ್ತು ವರ್ಷಗಳಿಂದ ತವರು ಮನೆಯಾದ ಜಗದಾಳ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆದರೆ, ಎಂಟು ತಿಂಗಳುಗಳಿಂದ ತೇರದಾಳದಲ್ಲಿರುವ ಕಾಡಯ್ಯ ಎಂಬುವವರ ಬಳಿ ಇದ್ದರು. ತವರು ಮನೆಯ ಆಸ್ತಿಗಾಗಿ ಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಿದ್ದರು. ನ್ಯಾಯಾಲಯವು ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಆದೇಶ ಮಾಡಿತ್ತು. 

ADVERTISEMENT

ಮಂಗಳವಾರ ಮಧ್ಯಾಹ್ನ 2ರ ಸುಮಾರಿಗೆ ಮೃತ ಚಂದ್ರವ್ವ ಅವರನ್ನು ಆರೋಪಿತರು ಎಳೆದುಕೊಂಡು ಹೋಗಿ ಕಾಲುವೆಗೆ ನೂಕಿದ್ಧಾರೆ. ಕೂಗಾಡಿದಾಗ ಮೇಲಕ್ಕೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಆಗ ಚಂದ್ರವ್ವ, ತನ್ನ ಜೀವಕ್ಕೆ ಅಪಾಯವಿದ್ದು, ಕಾಪಾಡಬೇಕು ಎಂದು ಭೇಟಿಗೆ ಬಂದಿದ್ದ ಕೆಲವರಲ್ಲಿ ಮನವಿ ಮಾಡಿದ್ದಾರೆ. ಆದರೆ, ಆರೋಪಿಗಳು ಗೋಕಾಕದಲ್ಲಿ ಚಿಕಿತ್ಸೆ ಕೊಡಿಸಲೆಂದು ಅಲ್ಲಿಂದ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.

ಗುರ್ಲಾಪುರ ಕ್ರಾಸ್ ಬಳಿ ರಾತ್ರಿ 8ರ ಸುಮಾರಿಗೆ ಕತ್ತು ಹಿಚುಕಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಲ್ಲಪ್ಪ ನಿಲಜಗಿ ಮತ್ತು ಶೋಭಾ ನಿಲಜಗಿ ತಲೆಮರೆಸಿಕೊಂಡಿದ್ದಾರೆ.

ಚಂದ್ರವ್ವ ಅವರು ತೇರದಾದ ಅಲ್ಲಮಪ್ರಭು ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳ್ಳಿಯ ದ್ವಾರ ಮಾಡಿಸಿಕೊಟ್ಟಿದ್ದರು. ಅನ್ನ ದಾಸೋಹಕ್ಕೂ ದೇಣಿಗೆ ನೀಡಿದ್ದರು. ಹೊಲವನ್ನು ದಾನ ಮಾಡಿದರೆ ತಮಗೆ ಏನೂ ಸಿಗುವುದಿಲ್ಲ ಎಂದು ಸಂಬಂಧಿಗಳೇ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೇರದಾಳದ ನಿವಾಸಿ ಕಾಡಯ್ಯ ಬಂಗಿ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್ಐ ಶಾಂತಾ ಹಳ್ಳಿ ತನಿಖೆ ಮುಂದುವರೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.