ಕೆರೂರ (ಬಾಗಲಕೋಟೆ ಜಿಲ್ಲೆ): ‘2004ರ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ನಕಲಿ ಮತದಾನ ಕಾರಣ’ ಎಂದು ಶಾಸಕ ಜೆ.ಟಿ. ಪಾಟೀಲ ಆರೋಪಿಸಿದರು.
ಭಾನುವಾರ ಸಮೀಪದ ಕಾಡರಕೊಪ್ಪ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆ ಚುನಾವಣೆಯಲ್ಲಿ 35,400 ಮತಗಳ ಅಂತರದಿಂದ ಸೋಲು ಕಂಡಿದ್ದೆ. ಅಂದಿನ ಜಿಲ್ಲಾಧಿಕಾರಿ ಶಿವಸೇಲ್ ಅವರು ಮತದಾರರ ಪಟ್ಟಿಯನ್ನು ಪರಿಷ್ಕರಿಸಿದಾಗ ನಕಲಿ ಮತದಾರರು ಬೀಳಗಿ ಕ್ಷೇತ್ರದಲ್ಲಿ ಇರುವುದು ಕಂಡು ಬಂದಿತ್ತು. ಈ ನಕಲಿ ಮತಗಳು ಅಂದಿನ ನನ್ನ ಸೋಲಿಗೆ ಕಾರಣವಾಗಿದ್ದವು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅಂದಿನ ಮತದಾರರ ಪಟ್ಟಿ ಇಂದಿಗೂ ಜಿಲ್ಲಾಡಳಿತ ಭವನದಲ್ಲಿ ಭದ್ರವಾಗಿದೆ. ನಕಲಿ ಮತದಾರರನ್ನು ಸೃಷ್ಟಿಸುವುದು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದಂತೆ. ಈ ಬಗ್ಗೆ ನಮ್ಮ ನಾಯಕ ರಾಹುಲ್ ಗಾಂಧಿ ಹೋರಾಟ ನಡೆಸಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.