ADVERTISEMENT

ರಬಕವಿ ಬನಹಟ್ಟಿ: ಕಾರ ಹುಣ್ಣಿಮೆಗೆ ಮಣ್ಣಿನ ಎತ್ತು ತಯಾರಿಸುತ್ತಿರುವ 25 ಕುಟುಂಬಗಳು

ವಿಶ್ವಜ ಕಾಡದೇವರ
Published 11 ಜೂನ್ 2025, 4:29 IST
Last Updated 11 ಜೂನ್ 2025, 4:29 IST
<div class="paragraphs"><p>ಬನಹಟ್ಟಿ ನಗರದಲ್ಲಿ ಮಂಗಳವಾರ ಕಾರ ಹುಣ್ಣಿಮೆಯ ಅಂಗವಾಗಿ ಕುಂಬಾರರು ಎತ್ತುಗಳನ್ನು ತಯಾರಿಸುವುದು ಗಮನ ಸೆಳೆಯಿತು</p></div>

ಬನಹಟ್ಟಿ ನಗರದಲ್ಲಿ ಮಂಗಳವಾರ ಕಾರ ಹುಣ್ಣಿಮೆಯ ಅಂಗವಾಗಿ ಕುಂಬಾರರು ಎತ್ತುಗಳನ್ನು ತಯಾರಿಸುವುದು ಗಮನ ಸೆಳೆಯಿತು

   

ರಬಕವಿ ಬನಹಟ್ಟಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಹಬ್ಬಗಳು ಕೂಡಾ ಆರಂಭವಾಗುತ್ತವೆ. ಕಾರ ಹುಣ‍್ಣಿಮೆ ಹಬ್ಬಗಳನ್ನು ಕರೆದುಕೊಂಡು ಬರುತ್ತದೆ ಎಂದು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಜನರು ಸಾಮಾನ್ಯವಾಗಿ ಮಾತನಾಡುತ್ತಾರೆ. 

ನಗರದ ಹನುಮಾನ ದೇವಸ್ಥಾನದ ಮುಂಭಾಗದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ರಸ್ತೆ ಮಾರ್ಗದಲ್ಲಿ ಹಾಗೂ ಸಮೀಪದ ಹೊಸೂರಿನ ಇಪ್ಪತ್ತೈದಕ್ಕೂ ಹೆಚ್ಚು ಕುಂಬಾರ ಮನೆತನದವರು ಮಂಗಳವಾರ ಬೆಳಿಗ್ಗೆಯಿಂದಲೇ ಮಣ್ಣಿನ ಎತ್ತುಗಳನ್ನು ತಯಾರಿಸಿದರು. ಸಂಜೆ 7 ರವರೆಗೆ ಮಣ್ಣಿನ ಎತ್ತುಗಳನ್ನು ಮಾರಾಟ ಮಾಡಿದರು.

ADVERTISEMENT

₹60ರಿಂದ ₹100 ಅದರಲ್ಲಿ ಅಂದಾಜು ಐದಾರು ಸಾವಿರದಷ್ಟು ಎತ್ತಿನ ಜೋಡಿಗಳು ಮಾರಾಟಗೊಂಡವು.

ಭಾರತೀಯರು ಆಚರಿಸುವ ಹಬ್ಬಗಳು ಒಕ್ಕಲುತನವನ್ನು ಅವಲಂಬಿಸಿವೆ. ಅದರಲ್ಲೂ ಮಣ್ಣಿನ ಪೂಜೆಗೆ ಮಹತ್ವ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಅದಕ್ಕಾಗಿ ಎತ್ತುಗಳ ಪೂಜೆಯನ್ನು ಸಲ್ಲಿಸುವುದು ಮೊದಲ ಆದ್ಯತೆ. ರೈತರು ಕಾರ ಹುಣ್ಣಿಮೆಯ ಸಂದರ್ಭದಲ್ಲಿ ಎತ್ತುಗಳನ್ನು ಪೂಜಿಸುತ್ತಾರೆ. ನಂತರ ಆಷಾಢ ಮಾಸದಲ್ಲಿ ಬರುವ ನಾಲ್ಕು ಮಂಗಳವಾರದಂದು ಗುಳ್ಳವ್ವನನ್ನು ಪೂಜಿಸುತ್ತಾರೆ, ನಾಗ ಪಂಚಮಿಯ ಸಂದರ್ಭದಲ್ಲಿ ನಾಗ ಪೂಜೆ, ನಂತರ ಗಣಪತಿಯ ಪೂಜೆ ಕೊನೆಯಲ್ಲಿ ಗೌರಿ ಮತ್ತು ಶೀಗೆ ಹುಣ್ಣಿಮೆಯ ಸಂದರ್ಭದಲ್ಲಿ ಮಣ್ಣಿನ ಪೂಜೆಯನ್ನು ನೆರವೇರಿಸುತ್ತಾರೆ.

ಕಳೆದ ನಾಲ್ಕು ದಶಕಗಳಿಂದ ಹೊಸೂರಿನ ಈರಪ್ಪ ಕುಂಬಾರ ಅವರು ಒಂದೇ ಸ್ಥಳದಲ್ಲಿ ಕುಳಿತುಕೊಂಡು ಎತ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಚಂದ್ರವ್ವ ಕುಂಬಾರ ಎಂಬ ಅಂದಾಜು 90 ವರ್ಷದ ಅಜ್ಜಿ ಈಗಲೂ ಹನುಮಾನ ದೇವಸ್ಥಾನದ ಮುಂಭಾಗದಲ್ಲಿ ಎತ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಹೊಸೂರಿನ ಕಾಶವ್ವ ಕುಂಬಾರ, ಪಿಯುಸಿ ದ್ವಿತೀಯ ವರ್ಷ‌ದಲ್ಲಿ ಓದತ್ತಿರುವ ಮೋಹನ ಕುಂಬಾರ, ದೇವೇಂದ್ರ ಕುಂಬಾರ, ಯಲ್ಲವ್ವ ಕುಂಬಾರ, ಸ್ಥಳೀಯ ಕಾಲೇಜಿನಲ್ಲಿ ಬಿ.ಎ. ದ್ವಿತೀಯ ಸೆಮ್ ನಲ್ಲಿ ಓದುತ್ತಿರುವ ರೇಣುಕಾ ಕುಂಬಾರ, ಶಿವಪ್ಪ ಕುಂಬಾರ ಎತ್ತುಗಳನ್ನು ಮಾಡಿ ಮಾರಾಟ ಮಾಡಿದರು.

ಆಧುನಿಕತೆ ಭರಾಟೆ ಇದ್ದರೂ ಗ್ರಾಮೀಣ’ರು ಇನ್ನೂ ದೇಸಿ ಆಚರಣೆಗಳಿಗೆ ಮಹತ್ವ ನೀಡುತ್ತಿರುವುದಕ್ಕೆ ಕಾರ ಹುಣ್ಣಿಮೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಬಡವರು ಮತ್ತು ಶ್ರೀಮಂತರು ಎಂಬ ಬೇಧ ಭಾವ ಇಲ್ಲದೆ ಎತ್ತುಗಳನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗಿ ಪೂಜಿಸುತ್ತಾರೆ‘ ಎನ್ನುತ್ತಾರೆ ನಗರದ ಗೌಡರಾದ ಸಿದ್ದನಗೌಡ ಪಾಟೀಲರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.