ADVERTISEMENT

ಬಾಗಲಕೋಟೆ: ಬದನೆ ಬೆಳೆದು ಲಾಭ ಕಂಡ ರೈತ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 5:13 IST
Last Updated 30 ಜೂನ್ 2025, 5:13 IST
ಬದನೆಯೊಂದಿಗೆ ರೈತ ಈಶ್ವರ ತೇರದಾಳ
ಬದನೆಯೊಂದಿಗೆ ರೈತ ಈಶ್ವರ ತೇರದಾಳ   

ಮಹಾಲಿಂಗಪುರ: ನಿರಂತರವಾಗಿ ಬೇಡಿಕೆ ಇರುವ ತರಕಾರಿ ಬದನೆಯನ್ನು 20 ಗುಂಟೆ ಜಮೀನಿನಲ್ಲಿ ಬೆಳೆಯುತ್ತಿರುವ ಸಮೀಪದ ಬುದ್ನಿ ಪಿಡಿಯ ರೈತ ಈಶ್ವರ ತೇರದಾಳ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ.

ನರ್ಸರಿಯೊಂದರಲ್ಲಿ ಪಂಚಗಂಗಾ ತಳಿಯ ಬದನೆ ಸಸಿಗಳನ್ನು ₹1 ಒಂದರಂತೆ 2 ಸಾವಿರ ಸಸಿ ಖರೀದಿಸಿ ಗಿಡದಿಂದ ಗಿಡಕ್ಕೆ ಎರಡುವರೆ ಅಡಿ ಮತ್ತು ಸಾಲಿನಿಂದ ಸಾಲಿಗೆ ಆರು ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ.

ಗಿಡಗಳ ಕೊಯ್ಲು ಆರಂಭವಾಗಿದ್ದು, ಮುಧೋಳ, ಮಹಾಲಿಂಗಪುರ, ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧೆಡೆ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. 20 ಗುಂಟೆ ಜಮೀನಿನಲ್ಲಿ ಬದನೆ ನಾಟಿಗೆ ₹50 ಖರ್ಚು ಮಾಡಿದ್ದಾರೆ.

ADVERTISEMENT

‘ಏಪ್ರಿಲ್ ಕೊನೆಯ ವಾರದಲ್ಲಿ ನಾಟಿ ಮಾಡಿದ್ದು, 50 ರಿಂದ 55 ದಿನಕ್ಕೆ ಕಾಯಿ ಬರಲು ಆರಂಭಿಸಿದೆ. ವಾರಕ್ಕೆ ಎರಡು ಬಾರಿ ಬದನೆ ಕೊಯ್ಲು ಮಾಡುತ್ತೇವೆ. ಈಗ ಮೂರನೇ ಕೊಯ್ಲು ಮಾಡಿ ಮಾರುಕಟ್ಟೆಗೆ ಕಳುಹಿಸಿದ್ದೇವೆ. ಈಗ ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಮುಂದಿನ ಐದಾರು ತಿಂಗಳು ಬದನೆ ಪಡೆದುಕೊಳ್ಳಬಹುದು. ಗಿಡಗಳು ಬಾಗದಿರಲಿ ಎಂದು ಬಳ್ಳಿಗಳನ್ನು ಮೇಲಕ್ಕೆ ಕಟ್ಟಿದ್ದೇವೆ’ ಎನ್ನುತ್ತಾರೆ ಈಶ್ವರ.

‘ನಾಟಿ ಮಾಡಿದ ನಂತರ ಡ್ರಿಪ್ ಮೂಲಕ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಹಾಕಬೇಕು. ವಾತಾವರಣಕ್ಕೆ ತಕ್ಕಂತೆ ನೀರು ಬಿಡುವುದು ಹಾಗೂ ಔಷಧ ಸಿಂಪಡಿಸುವುದು ಮುಖ್ಯ. ಇದರಿಂದ ಬೆಳೆಗಳು ಉತ್ತಮವಾಗಿ ಬರುತ್ತವೆ. 15 ಕೆ.ಜಿ ಬದನೆ ತೂಗುವ ಟ್ರೇ ಒಂದಕ್ಕೆ ₹700 ದರ ಇದೆ. ಇಂತಹ 30 ಟ್ರೇ ಮಾರುಕಟ್ಟೆಗೆ ಕಳುಹಿಸಿ ಅಂದಾಜು ₹20 ಸಾವಿರಕ್ಕಿಂತ ಹೆಚ್ಚು ಲಾಭವಾಗಿದೆ. ಮುಂದಿನ ಐದಾರು ತಿಂಗಳು ಬದನೆ ದೊರೆಯಲಿದೆ. ಬೆಲೆ ಹೆಚ್ಚಾದರೆ ಲಾಭವೂ ಹೆಚ್ಚಾಗುತ್ತದೆ’ ಎಂದು ಈಶ್ವರ ಹೇಳುತ್ತಾರೆ.

ಸ್ವತಃ ರಸಗೊಬ್ಬರ ಅಂಗಡಿ ಮಾಲೀಕರಾಗಿರುವ ಈಶ್ವರ ತೇರದಾಳ ಅವರು, ಕಳೆದ ಮೂರು ವರ್ಷಗಳಿಂದ ಬದನೆ ಬೆಳೆಯುತ್ತಿದ್ದಾರೆ. ಅಗತ್ಯವಿರುವ ಗೊಬ್ಬರಗಳನ್ನು ಕಾಲಕಾಲಕ್ಕೆ ಬದನೆಗೆ ನೀಡುವ ಜತೆಗೆ ಇತರೆ ರೈತರಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ.

ಗಿಡಗಳಲ್ಲಿ ಬೆಳೆದಿರುವ ಬದನೆಕಾಯಿಗಳು
ಬದನೆ ಬೆಳೆಯುವುದು ತೀರ ಕಷ್ಟವಲ್ಲ. ವರ್ಷವಿಡೀ ಬೆಳೆಯಬಹುದು. ಆದರೆ ಉತ್ತಮ ಬೆಲೆ ಸಿಗಬೇಕು. ಅಂದಾಗ ಬದನೆ ಬೆಳೆಯಲು ರೈತರು ಮುಂದಾಗುತ್ತಾರೆ.
– ಈಶ್ವರ ತೇರದಾಳ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.