ADVERTISEMENT

ಅಮೀನಗಡ: ಜಾನುವಾರು ಮಾರಾಟಕ್ಕೆ ಮುಂದಾದ ರೈತರು

ಅತಿವೃಷ್ಟಿಯಿಂದ ಕಂಗಾಲಾಗಿರುವ ಅನ್ನದಾತರು

ಶಿ.ಗು.ಹಿರೇಮಠ
Published 19 ಅಕ್ಟೋಬರ್ 2020, 16:35 IST
Last Updated 19 ಅಕ್ಟೋಬರ್ 2020, 16:35 IST
ಅಮೀನಗಡ ಪಟ್ಟಣದಲ್ಲಿ ಶನಿವಾರ ನಡೆದ ಜಾನುವಾರು ಸಂತೆಯಲ್ಲಿ ಎತ್ತುಗಳನ್ನು ಮಾರಾಟ ಮಾಡಲು ಬಂದಿದ್ದ ಸೂಳೇಬಾವಿ ರೈತರು
ಅಮೀನಗಡ ಪಟ್ಟಣದಲ್ಲಿ ಶನಿವಾರ ನಡೆದ ಜಾನುವಾರು ಸಂತೆಯಲ್ಲಿ ಎತ್ತುಗಳನ್ನು ಮಾರಾಟ ಮಾಡಲು ಬಂದಿದ್ದ ಸೂಳೇಬಾವಿ ರೈತರು   

ಅಮೀನಗಡ (ಬಾಗಲಕೋಟೆ ಜಿಲ್ಲೆ): ಕಳೆದ ವರ್ಷ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದ ಈ ಭಾಗದ ರೈತರು, ಈ ವರ್ಷ ಕೋವಿಡ್‌ ಬಳಿಕ ಅತಿವೃಷ್ಟಿಯಿಂದ ಫಸಲು ಕಳೆದುಕೊಂಡು ಕಂಗಾಲಾಗಿದ್ದಾರೆ. ಸಂಸಾರ ನಡೆಸಲು ಹಲವು ರೈತರು ಮನೆಯಲ್ಲಿರುವ ಜಾನುವಾರುಗಳ ಮಾರಾಟಕ್ಕೆ ಮುಂದಾಗಿದ್ದಾರೆ.

ಹೀಗಾಗಿ ಜಾನುವಾರುಗಳ ಮಾರಾಟಗಾರರ ಸಂಖ್ಯೆ ಹಿಂದೆಂದಿಗಿಂತ ಹೆಚ್ಚಳವಾಗಿದೆ. ಅಮೀನಗಡ ಪಟ್ಟಣದಲ್ಲಿ ಶನಿವಾರ ನಡೆದ ಜಾನುವಾರು ಸಂತೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ತಮ್ಮ ಹಸು, ಎಮ್ಮೆ, ಎತ್ತುಗಳನ್ನು ಮಾರಾಟಕ್ಕೆ ತಂದಿದ್ದರು.

ಹೀಗಾಗಿ ಸಂತೆ ಎಂದಿನಂತೆ ಇರಲಿಲ್ಲ. ಎತ್ತು, ಆಕಳು, ಎಮ್ಮೆ, ಹೋರಿಗಳಿಂದ ತುಂಬಿ ಹೋಗಿತ್ತು. ಜಾನುವಾರುಗಳ ದರ ₹50 ಸಾವಿರದಿಂದ ₹1ಲಕ್ಷದವರೆಗೆ ನಿಗದಿಯಾಗಿತ್ತು. ಕೊಳ್ಳುವ, ಖರೀದಿಸುವ ವ್ಯವಹಾರ ಮಾತ್ರ ಮಂದವಾಗಿ ಸಾಗಿತ್ತು.

ADVERTISEMENT

‘ಸದ್ಯ ಮಳೆಯಿಂದಾಗಿ ಹೊಲದಲ್ಲಿನ ಎಲ್ಲ ಬೆಳೆ ನಾಶವಾಗಿದ್ದು ಖರ್ಚಿಗೆ ದುಡ್ಡು ಇಲ್ಲದಂತಾಗಿದೆ. ಹೀಗಾಗಿ ಎತ್ತುಗಳನ್ನು ಮಾರಿ ಬಂದ ಹಣದಿಂದ ಜೀವನ ಸಾಗಿಸುತ್ತೇವೆ’ ಎಂದು ಸೂಳೇಬಾವಿಯ ರೈತ ಸಂಗಪ್ಪ ಹುಲ್ಯಾಳ ಹೇಳಿದರು. ಈಗ ಬಿತ್ತುವ– ಉತ್ತುವ ಕಾರ್ಯ ಮುಗಿದ್ದಿದ್ದು ಮತ್ತೆ ಬೇಕಾದರೆ ಮುಂದಿನ ವರ್ಷ ಜೋಡೆತ್ತುಗಳನ್ನು ಕೊಂಡರಾಯಿತು ಎನ್ನುವುದು ರೈತರ ಅಭಿಪ್ರಾಯ.

ಲಿಂಗಸೂರಿನ ರೈತ ನಾಗಪ್ಪ ಕೋಟಿ ಅವರು, ತಮ್ಮ ಎತ್ತುಗಳನ್ನು ಮಾರಾಟಕ್ಕೆ ಮಾಡಲು ಬಂದಿದ್ದು ₹1.30 ಲಕ್ಷ ಬೆಲೆ ನಿಗದಿಪಡಿಸಿದ್ದರು. ಆದರೆ ಅಷ್ಟು ಬೆಲೆ ಕೊಟ್ಟು ಖರೀದಿ ಮಾಡಲು ಯಾರೂ ಮುಂದೆ ಬರುತ್ತಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡರು.

ಚಿಮ್ಮಲಗಿಯ ರೈತ ಕೆಂಚನಗೌಡ ಗೌಡರ ₹50 ಸಾವಿರ ಬೆಲೆ ಬಾಳುವ ಎಮ್ಮೆಯನ್ನು ಸಂತೆಗೆ ಮಾರಾಟ ಮಾಡಲು ತಂದಿದ್ದರು. ಆದರೆ ಕೇವಲ ₹25 ರಿಂದ ₹30 ಸಾವಿರ ಬೇಡಿಕೆ ಇದೆ. ‘ಮನೆಯ ಅಡಚಣೆಗೆ ಮಾರಲು ಬಂದಿದ್ದು ದರ ಕುದುರುತ್ತಿಲ್ಲ, ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ’ ಎಂದು ತಮ್ಮ ಎಮ್ಮೆಯನ್ನು ವಾಪಸ್ ಮನೆಗೆ ಹೊಡೆದುಕೊಂಡು ಹೋದರು.

ಒಟ್ಟು ಮಾರಾಟಕ್ಕೆ ಬಂದ 300 ಜಾನುವಾರುಗಳಲ್ಲಿ ಕೇವಲ 80 ರಾಸುಗಳು ಮಾರಾಟವಾಗಿವೆ ಎಂದು ಎಪಿಎಂಸಿ ಸಿಬ್ಬಂದಿ ನದಾಫ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.