ADVERTISEMENT

ಗದ್ದುಗೆ ಸ್ಥಳಾಂತರಿಸಿದರೆ ಹೋರಾಟ: ಶೀಲವಂತ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 5:47 IST
Last Updated 13 ಜುಲೈ 2021, 5:47 IST
ಗುಳೇದಗುಡ್ಡದ ಮುರಘಾಮಠದಲ್ಲಿ ಸೋಮವಾರ ಕಾಶೀನಾಥ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿದರು
ಗುಳೇದಗುಡ್ಡದ ಮುರಘಾಮಠದಲ್ಲಿ ಸೋಮವಾರ ಕಾಶೀನಾಥ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿದರು   

ಗುಳೇದಗುಡ್ಡ: ಸಂಕೇಶ್ವರ-ಸಂಗಮ ಹೆದ್ದಾರಿ ನಿರ್ಮಾಣದ ನಡುವೆ ಬರುವ ಲಿಂ. ಮುರಘಾಮಠದ ಶಾಂತವೀರ ಶ್ರೀಗಳ ಗದ್ದುಗೆ ಸ್ಥಳಾಂತರಿಸಿದರೆ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ತಿಳಿಸಿದ್ದಾರೆ.

ನಗರದ ಮುರಘಾಮಠದಲ್ಲಿ ಸೋಮವಾರ ಕಾಶೀನಾಥ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ‘ಕೆಲದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಗುಳೇದಗುಡ್ಡಕ್ಕೆ ಬಂದಾಗ ಗದ್ದುಗೆ ವಿಷಯವಾಗಿ ಅವರೊಂದಿಗೆ ಮಾತನಾಡಿದಾಗ, ಗದ್ದುಗೆಯನ್ನು ರಸ್ತೆ ನಡುವೆ ಇರುವಂತೆ ಮಾಡಿ ಎಂದು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಗದ್ದುಗೆ ಸ್ಥಳಾಂತರಿಸುವ ಪ್ರಶ್ನೆಯೇ ಬರುವುದಿಲ್ಲ’ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಮಾವಿನಮರದ ಮಾತನಾಡಿ, ‘ಗದ್ದುಗೆ ತನ್ನದೆ ಆದ ಇತಿಹಾಸ ಹೊಂದಿದೆ. ಅದು ಶ್ರೀಮಠದ ಆಸ್ತಿ. ಮತ್ತು ಹೆದ್ದಾರಿಯ ಅವಶ್ಯಕತೆಯೂ ಇದೆ. ಆದರೆ ಅಧಿಕಾರಿಗಳು ಗದ್ದುಗೆ ತೆರವುಗೊಳಿಸದೇ ಗದ್ದುಗೆ ಉಳಿಸಲು ಸಾಧ್ಯತೆಗಳ ಬಗ್ಗೆ ಚರ್ಚಿಸಲು ಕಾಲಾವಕಾಶ ನೀಡಲಿ. ಸೌಹಾರ್ದಯುತವಾಗಿ ಎಲ್ಲರೂ ಇನ್ನೊಂದು ಸಭೆ ಸೇರಿ ನಿರ್ಣಯಕ್ಕೆ ಬರೋಣ’ ಎಂದು ಹೇಳಿದರು.

ADVERTISEMENT

ಮಾಜಿಶಾಸಕ ಮಲ್ಲಿಕಾರ್ಜುನ ಬನ್ನಿ, ಅಶೋಕ ಹೆಗಡೆ, ಪ್ರಕಾಶ ಮುರಗೋಡ, ರವಿ ಪಟ್ಟಣಶೆಟ್ಟಿ, ಮನೋಹರ ಶೆಟ್ಟೆರ್, ರಾಜು ದೇಸಾಯಿ, ಮಧುಸೂಧನ ತಿವಾರಿ ಕಮಲಕಿಶೋರ ಮಾಲಪಾಣಿ, ಸಂಪತ್‍ಕುಮಾರಾಠಿ, ಗಣೇಶ ಶೀಲವಂತ ಸೇರಿದಂತೆ ಸಭೆಯಲ್ಲಿ ಸೇರಿದ ಎಲ್ಲರೂ ಗದ್ದುಗೆ ತೆರವಿಗೆ ವಿರೋಧ ವ್ಯಕ್ತಪಡಿಸಿದರು.

ಶಾಸಕರಿಗೆ ಮನವಿ ಕೊಡಲು ನಿರ್ಣಯ: ಮಂಗಳವಾರ ನಗರಕ್ಕೆ ಬರುತ್ತಿರುವ ಶಾಸಕ ಸಿದ್ದರಾಮಯ್ಯ ಅವರಿಗೆ ಗದ್ದುಗೆ ಇದ್ದ ಸ್ಥಳದಲ್ಲಿ ಉಳಿಸಿ ರಸ್ತೆ ವಿಸ್ತರಣೆ ಮಾಡುವಂತೆ ಮನವರಿಕೆ ಮಾಡಿ, ಮನವಿ ಕೊಡುವ ನಿರ್ಣಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.