ರಬಕವಿ ಬನಹಟ್ಟಿ: ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಗುಣಮಟ್ಟದ ಆಹಾರ ಪೂರೈಕೆ ಮಾಡುವ ಸಲುವಾಗಿ ಆಹಾರ ಉದ್ದಿಮೆದಾರರು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಗುಣಮಟ್ಟದ ಆಹಾರ ಪೂರೈಕೆ ಮಾಡುವವರಿಗೆ ಕಾನೂನು ರೀತಿಯ ಸೌಲಭ್ಯಗಳನ್ನು ನಗರಸಭೆಯಿಂದ ನೀಡಲಾಗುವುದು ಎಂದು ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ರಮೇಶ ಜಾಧವ ತಿಳಿಸಿದರು.
ಗುರುವಾರ ಅವರು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಆಹಾರ ಸುರಕ್ಷತಾ ಅಧಿಕಾರಿ ಯಶವಂತ ಅರುಣ ಆಹಾರ ಉದ್ದಿಮೆದಾರರಿಗೆ ತರಬೇತಿ ನೀಡಿದರು. ಆಹಾರ ಉದ್ದಿಮೆದಾರರು ಕಡ್ಡಾಯವಾಗಿ ಲೈಸನ್ಸ್ ಪಡೆದಿರಬೇಕು. ಪೊಟ್ಟಣದ ಮೇಲೆ ಮುಕ್ತಾಯದ ದಿನಾಂಕವನ್ನು ಬರೆದಿರಬೇಕು. ಆಹಾರ ಸುರಕ್ಷತೆ, ತಪ್ಪು ಮಾಹಿತಿ ಮತ್ತು ಆಹಾರದಲ್ಲಿ ಕಲಬೆರೆಕೆ ಮಾಡಿದರೆ ಅಂಥವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಆಹಾರ ತಯಾರು ಮಾಡಲು ಕೇವಲ ನೈಸರ್ಗಿಕ ಬಣ‍್ಣಗಳನ್ನು ಮಾತ್ರ ಬಳಸಬೇಕು ಎಂದು ಯಶವಂತ ಅರುಣ ತಿಳಿಸಿದರು.
ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷೆ ದೀಪಾ ಗಾಡಿವಡ್ಡರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರಸಭೆಯ ಸ್ಥಾಯಿ ಸಮಿತಿ ಕಾರ್ಯಾಧ್ಯಕ್ಷ ಅರುಣ ಬುದ್ನಿ, ರಬಕವಿ ಬನಹಟ್ಟಿ ಮತ್ತು ಜಮಖಂಡಿ ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿ ಅಪ್ಪಾಜಿ ಹೂಗಾರ, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಶೋಭಾ ಹೊಸಮನಿ, ಜಿಲ್ಲಾ ಸಂಯೋಜಕ ನಾಗರಾಜ ಗೋನಲ್, ತಾಲ್ಲೂಕು ಸಂಯೋಜಕ ಎಂ.ಡಿ.ಮುಲ್ಲಾ, ಸಮುದಾಯ ಆರೋಗ್ಯ ಕೇಂದ್ರದ ಎಂ.ಕೆ.ಮುಲ್ಲಾ ಸೇರಿದಂತೆ ರಬಕವಿ ಬನಹಟ್ಟಿ ತಾಲ್ಲೂಕು ಆಹಾರ ಉದ್ದಿಮೆದಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.