ಬಾಗಲಕೋಟೆ: ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಗುರುವಾರ ಆಚರಿಸಲಾಯಿತು.
ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಚ್.ವೈ. ಮೇಟಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಎಸ್.ಜಿ. ನಂಜಯ್ಯನಮಠ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಹಾತ್ಮಾ ಗಾಂಧಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.
ವಿವಿಧ ಧರ್ಮದ ಗುರುಗಳಾದ ಪಂಡಿತ್ ಬಿಂಧುಮಾಧವಾಚಾರ್ಯ ನಾಗಸಂಪಗಿ ಅವರು ಭಗವದ್ಗೀತಾ, ಆಸೀಫ್ ಎಲ್. ಮುದಗಲ್ ಅವರು ಕುರಾನ್ ಹಾಗೂ ಫ್ರೆಡ್ಡಿರಾಜ ಅವರು ಬೈಬಲ್ ಪಠಣ ಮಾಡಿದರು.
ಬಸವೇಶ್ವರ ಕಲಾ ಮಹಾವಿದ್ಯಾಲಯದ ಆರ್.ಎಂ. ಬೆಣ್ಣೂರ ಮತ್ತು ಸಂಗೀತ ವಿಭಾಗದ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ. ಮನ್ನಿಕೇರಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಫೀರಜಾದೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಕಜಾ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ ಇದ್ದರು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮಾ ಗಾಂಧಿಯವರ 156ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಪ್ರೌಢಶಾಲಾ ವಿಭಾಗದಲ್ಲಿ ವೈಷ್ಣವಿ ಕರಲಟ್ಟಿ (ಪ್ರಥಮ), ನವ್ಯಶ್ರೀ ಹುಡೇದ (ದ್ವಿತೀಯ), ಸೌಮ್ಯ ಸಂತಪ್ಪನವರ (ತೃತೀಯ), ಪಿಯು ಕಾಲೇಜು ವಿಭಾಗದಲ್ಲಿ ಸಂಗೀತಾ ಬಾಗೋಡಿ (ಪ್ರಥಮ), ಕಾವೇರಿ ವಿಭೂತಿ (ದ್ವಿತೀಯ), ಪೂಜಾ ಅಗಸದವರ (ತೃತೀಯ), ಪದವಿ, ಸ್ನಾತಕೋತ್ತರ ವಿಭಾಗದಲ್ಲಿ ಶ್ರೀದೇವಿ ಕೋನಪ್ಪನವರ (ಪ್ರಥಮ), ಸ್ವಾತಿ ರಾಠೋಡ (ದ್ವಿತೀಯ), ಜ್ಯೋತಿ ಸಿದ್ದಾಪೂರ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಕಾಲೇಜುಗಳಲ್ಲಿ ಜಯಂತಿ
ಬಾಗಲಕೋಟೆ: ನಗರದ ವಿವಿಧ ಕಾಲೇಜುಗಳಲ್ಲಿ ಮಹಾತ್ಮಾಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ತಂತ್ರಜ್ಞಾನ ಕಾಲಘಟ್ಟದಲ್ಲಿರುವ ಯುವ ಸಮೂಹವು ಆದರ್ಶ ಬದುಕಿಗೆ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಅರುಣಕುಮಾರ ಗಾಳಿ ಹೇಳಿದರು.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಸ್ಥ ಬದುಕಿಗೆ ಗಾಂಧೀಜಿ, ಶಾಸ್ತ್ರೀಜಿಯವರ ತತ್ವಗಳು ದಾರಿದೀಪವಾಗಿವೆ ಎಂದರು.
ಬಡತನ ನಿವಾರಣೆ, ಅಸ್ಪ್ರಶ್ಯತೆ ಕೊನೆಗೊಳಿಸುವುದು, ಮಹಿಳಾ ಹಕ್ಕುಗಳನ್ನು ಜಾರಿಗೊಳಿಸಲು, ಧಾರ್ಮಿಕ ಹಾಗೂ ಜನಾಂಗೀಯ ಸೌಹಾರ್ದತೆ ತರಲು ಗಾಂಧೀಜಿ ಪರಿಶ್ರಮ ಪಟ್ಟಿದ್ದಾರೆ. ಸಾಮಾಜಿಕ ಸಮಾನತೆಗೆ ಬುನಾದಿ ಹಾಕಿದ್ದಾರೆ ಎಂದು ಹೇಳಿದರು.
ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಹೊಳಪು ನೀಡಿದರು. ಅವರ ಸರಳ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ವಿದ್ಯಾಗಿರಿಯ ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು: ಉಪನ್ಯಾಸಕ ಬಸವರಾಜ ಸಾಲಿ, ಉಭಯ ನಾಯಕರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.
ಪ್ರಾಚಾರ್ಯ ಬಸವರಾಜ ಪಾಟೀಲ ಮಾತನಾಡಿ, ಗಾಂಧೀಜಿಯವರು ಅಹಿಂಸೆಯ ತತ್ವಶಾಸ್ತ್ರ ಪ್ರವರ್ತಕರು. ಶಾಂತಿ ಅಹಿಂಸೆಗಳ ಹರಿಕಾರರು. ಸಮಾಜದಲ್ಲಿ ಧರ್ಮ ಮತ್ತು ಜಾತೀಯ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದಿದ್ದರು. ಶಾಸ್ತ್ರಿ ಅವರು ಹಸಿರು ಕ್ರಾಂತಿಗೆ ಮುಂದಾದರು ಎಂದರು.
ಉಪನ್ಯಾಸಕ ಪ್ರವೀಣ ಕರಡಿಗುಡ್ಡ, ಮಲ್ಲಪ್ಪ ನಾಡಗೌಡರ ಮಾತನಾಡಿದರು.
ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಕಾಲೇಜು: ಎನ್ಎಸ್ಎಸ್ ಘಟಕ 1 ಹಾಗೂ 2ರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿದರು.
ಎನ್‍ಎಸ್‍ಎಸ್ ಅಧಿಕಾರಿಗಳಾದ ಎಸ್.ಎಂ.ಹಡಪದ, ಎಸ್.ವೈ. ಬೊಮ್ಮಣ್ಣವರ, ಗ್ರಂಥಪಾಲಕ ಡಿ.ಎಚ್.ಬಿರಾದಾರ, ಎಫ್‍ಡಿಎ ರಾಜು ಚವ್ಹಾಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.