ADVERTISEMENT

ಬಾದಾಮಿ: ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜಿ.ಬಿ. ಶೀಲವಂತರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:29 IST
Last Updated 26 ಫೆಬ್ರುವರಿ 2026, 5:29 IST
ಜಿ.ಬಿ. ಶೀಲವಂತರ
ಜಿ.ಬಿ. ಶೀಲವಂತರ   

ಬಾದಾಮಿ: ತಾಲ್ಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮಾ.2ರಂದು ನಡೆಯುವ ತಾಲ್ಲೂಕು ಮಟ್ಟದ 10ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಮತ್ತು ಲೇಖಕ ಜಿ.ಬಿ. ಶೀಲವಂತರ ವಹಿಸಿಕೊಳ್ಳಲಿದ್ದಾರೆ.

ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಬಸವಮಂಟಪದ ಎಂ.ಜಿ. ವಾರಿ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಐತಿಹಾಸಿಕ ಪಟ್ಟಣ ಬಾದಾಮಿಯಲ್ಲಿ ಜನಿಸಿದ ಜಿ.ಬಿ.ಶೀಲವಂತರ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಮುಗಿಸಿ 1982ರಿಂದ ಸ್ಥಳೀಯ ಎಸ್.ಬಿ. ಮಮದಾಪುರ ಪದವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಷಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಅದೇ ಕಾಲೇಜಿನಲ್ಲಿ 2008ರಲ್ಲಿ ಪ್ರಾಚಾರ್ಯರಾಗಿ 2016 ರಲ್ಲಿ ನಿವೃತ್ತಿಯಾದರು.

ಉಪನ್ಯಾಸಕರಾಗಿ ಸೇವೆ ಆರಂಭಿಸಿದ ನಂತರ ಸೇವೆಯ ಜೊತೆಗೆ ಪ್ರವೃತ್ತಿಯಲ್ಲಿ ಲೇಖಕರಾಗಿ ಭಾರತದ ಸಂವಿಧಾನ, ಭಾರತದ ರಾಷ್ಟ್ರಪತಿಗಳು, ಭಾರತೀಯ ಸಂವಿಧಾನಾತ್ಮಕ ವ್ಯವಸ್ಥೆ, ಸಾರ್ವಜನಿಕ ಆಡಳಿತ, ಶಿರಡಿ ಸಾಯಿ ಬಾಬಾ ಚರಿತ್ರೆ, ಹಾನಗಲ್ ಸದಾಶಿವ ಶಿವಯೋಗಿ ಮೊದಲಾದ ಕೃತಿಗಳನ್ನು ರಚಿಸಿದರು.

ADVERTISEMENT

ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರಕ್ಕೆ ಸಂಬಂಧಿಸಿದ 11 ಕ್ಕೂ ಅಧಿಕ ಪಠ್ಯಪುಸ್ತಗಳನ್ನು ಬರೆದಿದ್ದಾರೆ. ಪುಲಿಕೇಶಿ ಸಿರಿ ಹೊನ್ನೊಡಲು, ಸನ್ನಿಧಾನ, ಪುಷ್ಪಗಿರಿ ಗ್ರಂಥಗಳ ಸಂಪಾದನೆ ಮಾಡಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ.ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಚಿಂತನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಗೋವಾ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯ ಕುರಿತು ಪ್ರಬಂಧ ಮಂಡಿಸಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಕಾಲೇಜಿನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಡಿನ ವಿವಿಧ ಕಾಲೇಜು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಸಾಹಿತ್ಯ ಮತ್ತು ಅಧ್ಯಾತ್ಮ ಕುರಿತು ಉಪನ್ಯಾಸ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.