ಬೀಳಗಿ: ‘ಮಾರ್ಚ್ 25 ರಿಂದ ಏ.6 ರವರೆಗೆ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು , ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಶಾಂತಿಯುತವಾಗಿ ನಡೆಸಲು ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಗ್ರೇಡ್ 2 ತಹಶೀಲ್ದಾರ್ ಆನಂದ ಕೊಲಾರ ಹೇಳಿದರು.
ಸ್ಥಳೀಯ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂಗವಾಗಿ ಶುಕ್ರವಾರ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಉಪ ಅಧೀಕ್ಷಕರಿಗಾಗಿ ಆಯೋಜಿಸಿದ್ದ ಪರೀಕ್ಷಾ ಸಿದ್ಧತೆ ಸಭೆಯಲ್ಲಿ ಮಾತನಾಡಿದರು.
‘ಆಯಾ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಗಳ ನಾಮಫಲಕ ಅಳವಡಿಸಬೇಕು. ಕೂಡಲು ಉತ್ತಮ ಬೆಂಚ್ ವ್ಯವಸ್ಥೆ ಕಲ್ಪಿಸಬೇಕು. ಕೊಠಡಿಗಳಲ್ಲಿ ಸಮಯಕ್ಕೆ ಸರಿಯಾಗಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆ ಒದಗಿಸಬೇಕು. ಕೇಂದ್ರಗಳಲ್ಲಿ ಸಮಸ್ಯೆಗಳು ಎದುರಾದಲ್ಲಿ ಕೊಠಡಿಗಳ ಮೇಲ್ವಿಚಾರಕರು ಅಧೀಕ್ಷಕರ ಗಮನಕ್ಕೆ ತರಬೇಕು’ ಎಂದು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಆದಾಪುರ ಮಾತನಾಡಿ, ‘ಬೀಳಗಿ ವ್ಯಾಪ್ತಿಯ 48 ಶಾಲೆಯ 7 ಪರೀಕ್ಷಾ ಕೇಂದ್ರಗಳನ್ನು ಆರಂಭಿಸಿದ್ದು, ಈ ಬಾರಿ ಒಟ್ಟು 2,970 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ’ ಎಂದರು.
‘ತಾಲ್ಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು ಪರೀಕ್ಷಾ ಕೊಠಡಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ಥಾಪಿಸಿರುವ ಅಂತರ್ಜಾಲದ ಮೂಲಕ ವೀಕ್ಷಿಸಬಹುದು’ ಎಂದು ತಿಳಿಸಿದರು.
ಪಿಎಸ್ಐ ಅಭಿಷೇಕ ನಾಡಗೌಡ , ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬಳೆ, ತಾಲ್ಲೂಕು ಪರೀಕ್ಷಾ ನೋಡಲ್ ಅಧಿಕಾರಿ ಎಸ್.ಟಿ.ಬೆಳಕೊಪ್ಪ , ಪರೀಕ್ಷಾ ಅಧೀಕ್ಷಕರು, ಸಹಾಯಕ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕ ಜಾಗೃತಿ ದಳ ಅಧಿಕಾರಿಗಳು, ಮೊಬೈಲ್ ಸ್ವಾಧಿನಾಧಿಕಾರಿಗಳು, ಮಾರ್ಗಾಧಿಕಾರಿಗಳು, ಬಿಆರ್‌ಪಿ ಎಂ.ಬಿ.ಕನಬೂರ, ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.