ಮುಧೋಳ: ನಿರಂತರ ಮಳೆಯಿಂದ ಘಟಪ್ರಭಾ ನದಿಯ ಹಿಡಕಲ್ ಜಲಾಶಯ ಶೇ 100 ಭರ್ತಿಯಾಗಿದೆ (ಒಟ್ಟು ಸಾಮರ್ಥ್ಯ 51.0 ಟಿಎಂಸಿ ಅಡಿ). ಘಟಪ್ರಭಾ ನದಿಯ ಪ್ರವಾಹ ಹೆಚ್ಚಾಗುತ್ತ ಸಾಗಿದ್ದು ಗುರುವಾರ ಬೆಳಗಿನವರೆಗೆ ಮುಧೋಳ–ಯಾದವಾಡ ಸೇತುವೆ ಮೇಲೆ ನೀರು ಬರುವ ಸಾಧ್ಯತೆ ಅಧಿಕವಾಗಿದೆ.
ಈಗಾಗಲೇ ತಾಲ್ಲೂಕಿನ 8 ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ಮಿರ್ಜಿ ಗ್ರಾಮದಲ್ಲಿ ನೀರು ಬಂದಿದ್ದು 12 ಕುಟುಂಬಗಳ 62 ಜನರನ್ನು ಕಾಳಜಿ ಕೇಂದ್ರದಲ್ಲಿ ರಕ್ಷಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ತಾಲ್ಲೂಕಿನ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಹಾಗೂ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಹಾಗೂ ಅಧಿಕಾರಿಗಳ ತಂಡ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದರು. ಮಿರ್ಜಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯ ಪರಿಶೀಲಿಸಿದರು. ಅಧಿಕಾರಿಗಳು ಪ್ರವಾಹ ಪರಿಸ್ಥಿಯನ್ನು ನಿರ್ವಹಿಸಲು ಸನ್ನದ್ಧರಾಗಬೇಕು ಎಂದು ಹೇಳಿದರು.
ಘಟಪ್ರಭಾ ನದಿಯ ಪ್ರವಾಹ ನದಿ ಪಾತ್ರದ ಹೊಲಗಳಿಗೆ ನುಗ್ಗಿದ್ದು ಅಪಾರ ಪ್ರಮಾಣದ ಬೇಳೆ ನಾಶವಾಗಿದೆ. ಕಳೆದ ವರ್ಷ ಬೆಳೆ ಪರಿಹಾರ ಬಂದಿದ್ದು ಮಳಲಿ ಗ್ರಾಮದ ನದಿ ಪಾತ್ರದ ನೂರಾರು ಎಕರೆ ಜಮೀನುಗಳಿಗೆ ಪರಿಹಾರ ಬಂದಿಲ್ಲ ಎಂದು ಮಳಲಿ ಗ್ರಾಮಸ್ಥರು ದೂರಿದರು.
ಬಾದಾಮಿ: ‘ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಹೆಚ್ಚುವರಿ ನೀರನ್ನು ಬಿಡುತ್ತಿರುವುದರಿಂದ ನದಿ ದಂಡೆಯ ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಗ್ರಾಮಗಳಲ್ಲಿ ಡಂಗುರದ ಮೂಲಕ ತಿಳಿಸಲಾಗಿದೆ’ ಎಂದು ತಹಶೀಲ್ದಾರ್ ಕಾವ್ಯಶ್ರೀ ಎಚ್. ‘ಪ್ರಜಾವಾಣಿ’ ಪತ್ರಿಕೆಗೆ ಪ್ರತಿಕ್ರಿಯಿಸಿದರು.
ಪ್ರವಾಹದ ಮುನ್ನ ಗ್ರಾಮ ಆಡಳಿತಾಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ. ನದಿ ದಂಡೆಯ ಗ್ರಾಮಗಳಿಗೆ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಮಂಗಳವಾರ ಭೇಟಿ ನೀಡಿ ಜನರು ಮತ್ತು ಜಾನುವಾರು ನದಿ ದಂಡೆಗೆ ಹೋಗದಂತೆ ತಿಳಿಸಲಾಗಿದೆ ಎಂದರು. ಜನರಿಗೆ ಯಾವುದೇ ತೊಂದರೆಯಾಗದಂತೆ ಪ್ರತಿ ಗ್ರಾಮಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಬುಧವಾರ 12,000 ಕ್ಯೂಸೆಕ್ ನೀರು ಬಿಡಲಾಗಿದೆ ಎಂದು ನೀರಾವರಿ ಇಲಾಖೆಯ ಎಂಜನಿಯರ್ ರಾಜು ಬಿಸನಾಳ ಹೇಳಿದರು. ಮಲಪ್ರಭಾ ನದಿ ಒಡಲು ತುಂಬಿ ಭರ್ತಿಯಾಗಿ ಭೋರ್ಗರೆಯುತ್ತಿದೆ.
ಕುಳಗೇರಿ ಕ್ರಾಸ್: ಸಮೀಪದ ಗೋವನಕೊಪ್ಪ ಗ್ರಾಮದ ಬಳಿ ಇರುವ ಮಲಪ್ರಭಾ ನದಿಗೆ ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮದ ಇಂದಿರಾ ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರು ಹರಿಸಿದ ಪರಿಣಾಮ ಬುಧವಾರ ಬಾದಾಮಿ ತಾಲ್ಲೂಕಿನ ಕಿತ್ತಲಿ ಗ್ರಾಮಕ್ಕೆ ಬಾಗಲಕೋಟೆ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದರು.
ಬಾದಾಮಿ ತಾಲ್ಲೂಕಿನ ಕರ್ಲಕೊಪ್ಪ, ಹಾಗನೂರ, ಆಲೂರು ಎಸ್.ಕೆ, ತಳಕವಾಡ , ಬೀರನೂರ, ಗೋವನಕೊಪ್ಪ, ಕಳಸ, ಕಿತ್ತಲಿ ಸುಳ್ಳ, ಹೆಬ್ಬಳ್ಳಿ, ಮುಮ್ಮರಡ್ಡಿಕೊಪ್ಪ ಹಾಗೂ ಜಕನೂರ ಗ್ರಾಮಗಳ ಜನರು ಪ್ರವಾಹ ಭೀತಿಯಲ್ಲಿದ್ದಾರೆ. ರೈತರು ಬೆಳೆದ ಮೆಕ್ಕೆಜೋಳ, ಹೆಸರು, ಹತ್ತಿ ಹಾಗೂ ಕಬ್ಬು ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ.
ಗೋವನಕೊಪ್ಪ ಗ್ರಾಮದ ಮಲಪ್ರಭಾ ಹಳೇ ಸೇತುವೆ ಪಕ್ಕಕ್ಕಿರುವ ರೈತ ತುಳಸಪ್ಪ ಸೀನಪ್ಪನವರ ಅವರ ಕಬ್ಬು ಬೆಳೆ ಹಾಗೂ ಹೆಸರು ಬೆಳೆ ಸಂಪೂರ್ಣ ನೀರು ಪಾಲಾಗಿವೆ. ‘ಪ್ರತಿ ವರ್ಷ ಪ್ರವಾಹ ಬಂದರೂ ಇವತ್ತಿನವರೆಗೂ ಸರ್ಕಾರದಿಂದ ಒಂದು ರೂಪಾಯಿಯೂ ಬೆಳೆ ಪರಿಹಾರ ಬಂದಿಲ್ಲ. ಗೋವನಕೊಪ್ಪ ಗ್ರಾಮದಿಂದ ಕೂಡಲಸಂಗಮದವರೆಗೂ ನದಿ ಪಾತ್ರದ ಹಾಗೂ ನದಿ ಅಕ್ಕ- ಪಕ್ಕದ ರೈತರಿಗೆ ಬೆಳೆ ಪರಿಹಾರ ಬರುತ್ತಿದ್ದರೂ ನನಗೆ ಬರುತ್ತಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.
ಬಾದಾಮಿ ತಹಶೀಲ್ದಾರ್ ಕಾವ್ಯಾಶ್ರೀ ಎಚ್, ಉಪ ತಹಶೀಲ್ದಾರ್ ಮೋಮಿನ್, ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ, ಕಿತ್ತಲಿ ಗ್ರಾಮ ಪಂಚಾಯಿತಿ ಪಿಡಿಒ ಎಸ್.ಎನ್.ತೋಟರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.