ಬಾಗಲಕೋಟೆ: ಜಿಲ್ಲೆಯ ಘಟಪ್ರಭಾ ನದಿ ತೀರದಲ್ಲಿ ಗ್ರಾಮಗಳಿಗೆ ನೀರು ನುಗ್ಗಲಾರಂಭಿಸಿದೆ. ಗ್ರಾಮದಲ್ಲಿನ ಜನರಿಗೆ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ. ಕಾಳಜಿ ಕೇಂದ್ರ ತೆರೆಯದೇ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಎಂದರೆ ಜನರು ಎಲ್ಲಿಗೆ ಹೋಗಬೇಕು?
ಜುಲೈ ತಿಂಗಳಿನಿಂದಲೇ ಆಗಾಗ ನದಿ ಉಕ್ಕಿ ಹರಿಯುತ್ತಿದೆ. ಇನ್ನೇನು ಪ್ರವಾಹ ಬಂತು ಎನ್ನುವಾಗ ನದಿ ಶಾಂತವಾಗಿದೆ. ಆಗ ಸಭೆಗಳನ್ನು ನಡೆಸಿದ ಅಧಿಕಾರಿಗಳು ಕಾಳಜಿ ಕೇಂದ್ರಗಳಿಗೆ ಸ್ಥಳ ಗುರುತಿಸಲಾಗಿದೆ. ರಕ್ಷಣೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದರು. ಈಗ ಮನೆ ಬಾಗಿಲಿಗೆ ನೀರು ಬಂದರೂ ಕಾಳಜಿ ಕೇಂದ್ರ ಆರಂಭವಾಗಿಲ್ಲ.
ಜಿಲ್ಲಾಡಳಿತ ತ್ವರಿತಗತಿಯಲ್ಲಿ ಸ್ಪಂದಿಸದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ನಾಲ್ಕಾರು ದಿನಗಳಿಂದ ಬೆಳದು ನಿಂತಿದ್ದ ಬೆಳೆ ನೀರಿನಲ್ಲಿ ನಿಂತಿದೆ. ಬೆಳೆ ಹಾಳಾಗುತ್ತಿರುವುದು ಒಂದೆಡೆಯಾದರೆ, ಜಾನುವಾರು ಹಾಗೂ ಜನರ ರಕ್ಷಣೆ ಕೆಲಸವೂ ಆಗಬೇಕಿದೆ.
ಕಳೆದ ಬಾರಿ ಕಾಳಜಿ ಕೇಂದ್ರಗಳಲ್ಲಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಸರಿಯಾಗಿ ಮಾಡಿರಲಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಬಾರಿ ಮೇವಿನ ಸೂಕ್ತ ವ್ಯವಸ್ಥೆ ಮಾಡಬೇಕಿದೆ.
‘ಪ್ರತಿ ವರ್ಷ ಈ ಗ್ರಾಮಗಳಿಗೆ ಒಂದಲ್ಲ ಒಂದು ಬಾರಿ ನೀರು ನುಗ್ಗುತ್ತದೆ. ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಕೂಗು ಕೇಳಿ ಬರುತ್ತಲೇ ಇರುತ್ತದೆ. ಕೆಲವೆಡೆ ಸ್ಥಳಾಂತರಕ್ಕೆ ನಿರ್ಮಿಸಿದ ಮನೆಗಳು ಪಾಳು ಬಿದ್ದಿವೆ. ಪ್ರವಾಹ ಬಂದಾಗಲೊಮ್ಮೆ ಗಡಿಬಿಡಿಯಲ್ಲಿ ಓಡಾಡುವ ಅಧಿಕಾರಿ ವರ್ಗ ನಂತರ ಶಾಶ್ವತ ಪುನರ್ವಸತಿಯನ್ನು ಮರೆತು ಬಿಡುತ್ತದೆ’ ಎನ್ನುವುದು ಗ್ರಾಮಸ್ಥರ ದೂರು.
‘ನಂದಗಾವದಲ್ಲಿ ಈಗಾಗಲೇ ಕಾಳಜಿ ಕೇಂದ್ರ ತೆರೆಯಲಾಗಿದೆ. ಬುಧವಾರ ಬೆಳಿಗ್ಗೆ ವೇಳೆಗೆ ಮಿರ್ಜಿ, ಚನ್ನಾಳದಲ್ಲಿ ಕಾಳಜಿ ಕೇಂದ್ರ ತೆರೆಯಲಾಗುವುದು’ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.