
ಹೂಡಿಕೆ: ಹಣ
ಬಾಗಲಕೋಟೆ: ಸರ್ಕಾರಿ ನೌಕರರೊಬ್ಬರಿಗೆ ಷೇರಿನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಆಮಿಷ ತೋರಿಸಿ ₹73.25 ಲಕ್ಷ ವಂಚನೆ ಮಾಡಲಾಗಿದೆ.
(ವಿಐಪಿ) ಎಲೈಟ್ ಗೋಲ್ಡ್ ಸ್ಟಾಕ್ಸ್ ಟೀಮ್ ಎಂಬ ವಾಟ್ಸ್ ಆ್ಯಪ್ ಗ್ರೂಪಿಗೆ ಸರ್ಕಾರಿ ನೌಕರರನ್ನು ಸೇರಿಸಿಕೊಂಡು, ನಂತರ ಹಂತ, ಹಂತವಾಗಿ ಹಣ ಪಾವತಿಸಿಕೊಂಡು ವಂಚನೆ ಮಾಡಲಾಗಿದೆ.
ತನಿಷ್ಕಾ ಖನ್ನಾ ಎಂಬ ಮಹಿಳೆಯು ವಾಟ್ಸ್ ಆ್ಯಪ್ ಮೂಲಕ ನೌಕರನನ್ನು ಸಂಪರ್ಕಿಸಿ, ತಂಡದಲ್ಲಿ ಷೇರು ಮಾರುಕಟ್ಟೆ ಮಾಹಿತಿದಾರಳಾಗಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಾಳೆ.
ನಾನು ಹೇಳಿದ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ್ದಾಳೆ. ಸಿಂಧೂರಿ ಕುಮನ್, ದಿಯಾ ಎಂಬುವವರ ಹೆಸರಿನವರು ವಾಟ್ಸ್ ಆ್ಯಪ್ ಮೂಲಕ ನೀಡಿದ ಬ್ಯಾಂಕ್ ಖಾತೆಗಳಿಗೆ ಎರಡು ತಿಂಗಳ ಅವಧಿಯಲ್ಲಿ ₹43.25 ಲಕ್ಷ ಜಮಾ ಮಾಡಿದ್ದರು.
ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ನೌಕರನಿಗೆ ಹೂಡಿಕೆ ಮಾಡಿರುವ ಹಣವು ₹12.19 ಕೋಟಿಯಾಗಿದೆ ಎಂದು ತೋರಿಸಿದೆ. ಅದನ್ನು ವಿತ್ ಡ್ರಾ ಮಾಡಿಕೊಳ್ಳಲು ಹೋದಾಗ ಬಂದಿಲ್ಲ. ಆಗ ವಂಚಕರ ಜಾಲದ ಸದಸ್ಯರು ₹30 ಲಕ್ಷ ತೆರಿಗೆ ಪಾವತಿಸಬೇಕು ಎಂದು ತಿಳಿಸಿದ್ದಾರೆ.
ಅದನ್ನು ನಂಬಿದ ನೌಕರನು ತಂಗಿಯ ಬಳಿ ₹30 ಲಕ್ಷ ಪಡೆದುಕೊಂಡು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ನಾಲ್ಕೇ ದಿನಗಳಲ್ಲಿ ಪಾವತಿಸಿದ್ದಾರೆ.
ನಕಲಿ ಟ್ರೇಡಿಂಗ್ ಹೆಸರಿನಲ್ಲಿ ಬೇರೆ, ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಹೂಡಿಕೆ ಮಾಡಿರುವ ಹಣವನ್ನು ಪಾವತಿಸಿದೇ ಮೋಸ ಮಾಡಿದ್ದಾರೆ. ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.