ADVERTISEMENT

ಗುಳೇದಗುಡ್ಡ | ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ: ಪುರಸಭೆ ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:33 IST
Last Updated 16 ಅಕ್ಟೋಬರ್ 2025, 4:33 IST
ಗುಳೇದಗುಡ್ಡ ಪುರಸಭೆಯಲ್ಲಿ ಬುಧವಾರ ಸಾಮಾನ್ಯ ಸಭೆ ಜರುಗಿತು.
ಗುಳೇದಗುಡ್ಡ ಪುರಸಭೆಯಲ್ಲಿ ಬುಧವಾರ ಸಾಮಾನ್ಯ ಸಭೆ ಜರುಗಿತು.   

ಗುಳೇದಗುಡ್ಡ: ಹಲವು ಅಭಿವೃದ್ಧಿ ಕಾಮಗಾರಿಗಳು ಹಿಂದೆ ಬಿದ್ದಿರುವುದು ಹಾಗೂ ಪುರಸಭೆಯಲ್ಲಿ ಚರ್ಚೆಯಾದ ಸಮಸ್ಯೆಗಳ ಪರಿಹಾರ ಆಗದಿರುವ ಬಗ್ಗೆ ಪುರಸಭೆ ಸದಸ್ಯರು ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.

ಕನ್ನಡ ಭವನ ನಿರ್ಮಾಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ಥಳ ನೀಡುವುದು, ಪಟ್ಟಣದ ನೈರ್ಮಲ್ಯೀಕರಣ, ಸಾರ್ವಜನಿಕ ಶೌಚಾಲಯ, ಮೂತ್ರಾಲಯಗಳ ನಿರ್ವಹಣೆ, ಪಟ್ಟಣದ ಪ್ರಮುಖ ರಸ್ತೆಗಳ ನಿರ್ಮಾಣ, ಅರ್ಧಕ್ಕೆ ನಿಂತ ಕಂದಗಲ್ ಹನಮಂತರಾಯ ರಂಗ ಮಂದಿರದ ಮತ್ತು ಗಾಂಧೀ ಭವನದ ಕಾಮಗಾರಿ, ಉದ್ಯಾನಗಳ ಅಭಿವೃದ್ಧಿ, ನಿರುಪಯುಕ್ತವಾಗಿರುವ ಪುರಸಭೆ ಗ್ರಂಥಾಲಯಗಳು, ಲಿಲಾವ್ ಆಗಿರುವ ಮಳಿಗೆಗಳ ಹಸ್ತಾಂತರ ಹೀಗೆ ಇನ್ನೂ ಹಲವು ಸಮಸ್ಯೆಗಳು ಈ ಹಿಂದಿನ ಸಭೆಗಳಲ್ಲಿ ಚರ್ಚೆಯಾಗಿದ್ದರೂ ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಸದಸ್ಯರು ದೂರಿದರು.

ಎಂಟು ಮಹತ್ವದ ವಿಷಯಗಳ ಚರ್ಚೆ ನಡೆದು ಅವುಗಳಿಗೆ ಸಭೆಯ ಒಪ್ಪಿಗೆ ಪಡೆಯಬೇಕಿತ್ತು. ಆದರೆ ಸದಸ್ಯರಲ್ಲಿ ಒಮ್ಮತದ ಕೊರತೆಯಿಂದಾಗಿ ಕೆಲ ಕ್ಷಣ ಸಭೆ ಗೊಂದಲದ ಗೂಡಾಯಿತು. ಮುಖ್ಯಾಧಿಕಾರಿ ಎ.ಎಚ್. ಮುಜಾವರ ಸದಸ್ಯರಿಗೆ ಪುರಸಭೆ ಅಧಿನಿಯಮಗಳ ಬಗ್ಗೆ ಮಾಹಿತಿ ಹೇಳುತ್ತ ಸಭೆಯ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು.

ADVERTISEMENT

ಸಾಮಾನ್ಯ ಸಭೆ ಮಂಜೂರಾತಿ ಮುನ್ನಿರೀಕ್ಷಿಸಿ ಅನುಮೋದನೆ ನೀಡಿದ ಪ್ರಸ್ತಾವಗಳನ್ನು ದೃಢೀಕರಿಸುವ ವಿಷಯ ಹಾಗೂ 2025 ಮೇಯಿಂದ ಸೆಪ್ಟೆಂಬರ್‌ವರೆಗಿನ ಜಮಾ ಖರ್ಚಿನ ವಿಷಯಗಳಿಗೆ ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ ವಿರೋಧ ವ್ಯಕ್ತಪಡಿಸಿದರು. ಆದರೆ ಸಭೆ ಒಪ್ಪಿಗೆ ಸೂಚಿಸಿದ್ದರಿಂದ ಆ ವಿಷಯಗಳಿಗೂ ಅನುಮೋದನೆ ದೊರಕಿತು.

ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ ಕವಡಿಮಟ್ಟಿ, ಪುರಸಭೆ ಸದಸ್ಯರಾದ ಉಮೇಶ ಹುನಗುಂದ, ರಫೀಕ್ ಕಲ್ಬುರ್ಗಿ, ಯಲ್ಲಪ್ಪ ಮನ್ನಿಕಟ್ಟಿ, ಸಂತೋಷ ನಾಯನೇಗಲಿ, ವಿಠ್ಠಲ ಕಾವಡೆ, ವಿನೋದ ಮದ್ದಾನಿ, ಶಿಲ್ಪಾ ಹಳ್ಳಿ, ಪ್ರಶಾಂತ ಜವಳಿ ಹಾಗೂ ಅಧಿಕಾರಿಗಳು ಹಾಜರಿದ್ದರು.

ನ. 9ರಂದು ಸದಸ್ಯರ ಅಧಿಕಾರಾವಧಿ ಮುಕ್ತಾಯ
ನ. 9 ಅಥವಾ 10ರಂದು ಈಗಿರುವ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲಿದೆ. ಕೇವಲ 24 ದಿನಗಳು ಬಾಕಿ ಇರುವುದರಿಂದ ಸಾಮಾನ್ಯ ಸಭೆ ಕರೆಯಲು ಬರುವುದಿಲ್ಲ. ಬದಲಿಗೆ ಅಗತ್ಯ ತುರ್ತು ಕೆಲಸಗಳಿಗೆ ನಿರ್ಧಾರ ತೆಗೆದುಕೊಳ್ಳಲು ವಿಶೇಷ ಸಾಮಾನ್ಯಸಭೆ ಕರೆಯಲು ಅವಕಾಶವಿದೆ. ಇಲ್ಲಿಯವರೆಗೆ ಸಭೆಯಲ್ಲಿ ಚರ್ಚಿಸಿದ ಎಲ್ಲ ವಿಷಯಗಳಿಗೆ ಮಂಜೂರಾತಿ ನೀಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ಮನವಿ ಮಾಡಿ ಅನುಮೋದನೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.