
ಗುಳೇದಗುಡ್ಡ: ಲೋಕ ಕಲ್ಯಾಣಕ್ಕೆ ಉತ್ತಮ ಆಚಾರ, ವಿಚಾರಗಳನ್ನು ಒಳಗೊಂಡ ಶರಣ ಧರ್ಮ, ಶರಣ ಸಂಸ್ಕೃತಿಯನ್ನು ಪ್ರತಿಯೊಬ್ಬ ವ್ಯಕ್ತಿ ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಪಾವನಗೊಳಿಸುತ್ತದೆ ಎಂದು ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 40ನೇ ವಾರ್ಷಿಕ ಪುಣ್ಯರಾಧನೆಯ ಶರಣ ಸಂಗಮ ಸಮಾರೋಪ ಹಾಗೂ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಕಾಯಕ, ನಿತ್ಯ ಇಷ್ಠಲಿಂಗಪೂಜೆ, ಭಕ್ತಿ, ದಾಸೋಹ, ಪ್ರಸಾದ, ಅನುಭಾವ ಇವು ಶರಣ ಸಂಸ್ಕೃತಿಯಾಗಿವೆ ಎಂದು ಹೇಳಿದರು.
ಪದ್ಮಶಾಲಿ ನೇಕಾರ ಸಮಾಜ ಗುರುಪೀಠದ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾನ ಹಾಕಬಹುದು. ಪುಣ್ಯಪ್ರಾಪ್ತಿಗೆ ನವದಂಪತಿಗಳಾಗುವ ಪ್ರತಿಯೊಬ್ಬರೂ ಮಠದಲ್ಲಿ ನಡೆಯುವ ಸಾಮೂಹಿಕದಲ್ಲಿ ಮದುವೆಯಾಗಬೇಕು. ಪೂಜ್ಯರ ಸನ್ನಿಧಾನದಲ್ಲಿ ವಿವಾಹವಾಗುವುದು ಪುಣ್ಯದ ಕಾರ್ಯವಾಗಿದೆ ಎಂದರು.ಶಿವಶರಣ ಸಿದ್ದಾರೂಢ ಮಠದ ಗಣಲಿಂಗ ಸ್ವಾಮೀಜಿ ಮಾತನಾಡಿದರು.
ಇದೇ ಸಂದರ್ಭದಲ್ಲಿ 6 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಶ್ರೀಪೀಠದ ಶ್ರೀಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳ ಪೀಠಾರೋಹಣ ಕಾರ್ಯಕ್ರಮ ಬಹಳಷ್ಟು ಅರ್ಥಪೂರ್ಣವಾಗಿ ಜರುಗಿತು.
ಅಡ್ಡಪಲ್ಲಕ್ಕಿ ಮಹೋತ್ಸವ : ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 40ನೇ ವರ್ಷದ ಪುಣ್ಯರಾಧನೆಯ ನಿಮಿತ್ತ ಹಮ್ಮಿಕೊಂಡ ಕರ್ತೃಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ ರಜತ ಮೂರ್ತಿ ಹಾಗೂ ವಚನ ಕಟ್ಟುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಹಳಷ್ಟು ಸಡಗರ, ಸಂಭ್ರಮದಿಂದ ಜರುಗಿತು.
ಮೊದಲಿಗೆ ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಅಡ್ಡಪಲ್ಲಕ್ಕಿಗೆ ವಿಶೇಷ ವಚನಾಭಿಷೇಕ, ಮಹಾಮಂಗಳಾರತಿ ಹಾಗೂ ವಿಶೇಷ ಪೂಜಾಕೈಂಕಾರ್ಯಗಳನ್ನು ಶ್ರದ್ಧಾ, ಭಕ್ತಿಯಿಂದ ನೆರವೇರಿಸಲಾಯಿತು. ಬಳಿಕ ಶ್ರೀಮಠದಿಂದ ಆರಂಭಗೊಂಡ ವಚನ ಕಟ್ಟುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಪಟ್ಟಣದ ಗಚ್ಚಿನಕಟ್ಟಿ, ಚೌಬಜಾರ್, ಅರಳಿಕಟ್ಟಿ, ಗುಗ್ಗರಿಪೇಟೆ, ಕಮತಗಿ ಕ್ರಾಸ್, ಹರದೋಳ್ಳಿ, ಸಾಲೇಶ್ವರ ದೇವಸ್ಥಾನ, ಪವಾರ್ ಕ್ರಾಸ್, ಪುರಸಭೆ, ಕಂಠಿಪೇಟೆ ಮೂಲಕ ಹಾಯ್ದು ಮರಳಿ ಶ್ರೀಮಠಕ್ಕೆ ಬಂದು ತಲುಪಿತು.
ಕಾರ್ಯಕ್ರಮದಲ್ಲಿ ಷಡಕ್ಷರಪ್ಪ, ತೋಟಪ್ಪ ಶೇಖಾ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಶರಣ ಸಂಗಮ ಸ್ವಾಗತ ಸಮಿತಿ ಅಧ್ಯಕ್ಷ ಆನಂದ ತಿಪ್ಪಾ, ಮಲ್ಲಿಕಾರ್ಜುನ ರಾಜನಾಳ ಮುಂತಾದವರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.