ಬಾದಾಮಿ: ‘ಮಲಪ್ರಭಾ ನದಿ ದಂಡೆಯಲ್ಲಿ ಶಿವಯೋಗಮಂದಿರವನ್ನು ಸ್ಥಾಪಿಸಿದ ಹಾನಗಲ್ ಕುಮಾರ ಶ್ರೀ ರಾಜ್ಯದಾದ್ಯಂತ ಪಾದಯಾತ್ರೆ, ಚಕ್ಕಡಿಯ ಮೂಲಕ ಸಂಚರಿಸಿ ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿದರು’ ಎಂದು ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಶಿವಯೋಗಮಂದಿರದಲ್ಲಿ ಶುಕ್ರವಾರ ಹಾನಗಲ್ ಕುಮಾರ ಶ್ರೀ 158ನೇ ಜಯಂತಿ ಮಹೋತ್ಸವ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
‘ಹಾನಗಲ್ ಶ್ರೀ ಶಿವಯೋಗಮಂದಿರದಲ್ಲಿ 19ನೇ ಶತಮಾನದ ಆರಂಭದಲ್ಲಿ ವಟುಗಳಿಗೆ ಶಿಕ್ಷಣ ನೀಡಿ ನಾಡಿನ ಗುರು ವಿರಕ್ತಪೀಠ ಪರಂಪರೆ ಮಠಗಳಿಗೆ ಮಠಾಧೀಶರನ್ನಾಗಿ ರೂಪಿಸಿದರು. ಅವರನ್ನು ಸಮಾಜ ಸೇವೆಯಲ್ಲಿ ತೊಡಗಿಸಿದರು. ಶಿವಯೋಗಮಂದಿರದಲ್ಲಿ ಅಧ್ಯಯನ ಕೈಗೊಂಡ ವಟುಗಳು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಮಠಾಧೀಶರಾಗಿದ್ದಾರೆ’ ಎಂದು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
‘ಹಾನಗಲ್ ಶ್ರೀ ನಾಡಿನಾದ್ಯಂತ ಸಂಚರಿಸಿ ಅಖಿಲಭಾರತ ವೀರಶೈವ ಮಹಾಸಭೆಗಳನ್ನು ಸಂಘಟಿಸಿ ವೀರಶೈವ ಲಿಂಗಾಯತರನ್ನು ಒಗ್ಗೂಡಿಸುವ ಕಾರ್ಯ ಮಾಡಿದರು. ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅನೇಕ ಸಂಘ–ಸಂಸ್ಥೆಗಳಿಗೆ ಪ್ರೋತ್ಸಾಹಿಸಿದರು’ ಎಂದು ಹಂದಿಗುಂದ ಶಿವಾನಂದ ಸ್ವಾಮೀಜಿ ಹೇಳಿದರು.
ನಿವೃತ್ತ ಅಧಿಕಾರಿ ಎಸ್.ಎಂ. ಜಾಮದಾರ ಬರೆದ ‘ಅಖಿಲ ಭಾರತ ವೀರಶೈವ ಮಹಾಸಭೆಯು ಸತ್ಯವನ್ನು ಅರ್ಥಮಾಡಿಕೊಳ್ಳುವುದೇ’ ಎಂಬ ಪುಸ್ತಕದ ನಿಂದನೆಗಳಿಗೆ ಸ್ಪಷ್ಟೀಕರಣ ಕುರಿತು ದೆಹಲಿಯ ಕುಮಾರೇಶ್ವರ ಸೇವಾ ಸಮಿತಿ ಅಧ್ಯಕ್ಷ ಶ್ರೀಕಂಠ ಚೌಕಿಮಠ ಬರೆದ ‘ಬೆಂಕಿ ಹಚ್ಚುವುದು ಸುಲಭ, ಬೆಂಕಿ ಆರಿಸುವುದು ಕಷ್ಟ’ ಎಂಬ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆ ಮಾಡಿದರು.
ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಸ್ವಾಮೀಜಿ, ಹಾಳಕೆರೆ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಅಟವಿ ಶಿವಲಿಂಗ ಸ್ವಾಮೀಜಿ, ಪ್ರಭುರಾಜೇಂದ್ರ ಸ್ವಾಮೀಜಿ, ಚನ್ನಮಲ್ಲ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ವೃಷಭೇಂದ್ರ ಸ್ವಾಮೀಜಿ, ವಿವಿಧ ಮಠಾಧೀಶರು ಮತ್ತು ಶಿವಯೋಗಮಂದಿರದ ವಟು ಸಾಧಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.