
ಗುಳೇದಗುಡ್ಡ: ತಾಲ್ಲೂಕಿನ ಹರದೊಳ್ಳಿ ಗ್ರಾಮದಲ್ಲಿ ಹನಮಪ್ಪನ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದಿಂದ ಜರುಗಲಿದೆ.
ಹಿನ್ನಲೆ: ಹರದೊಳ್ಳಿ ಹನಮಪ್ಪನ ದೇವಸ್ಥಾನಕ್ಕೆ ಎಂಟನೂರು ವರ್ಷಗಳ ಇತಿಹಾಸವಿದೆ. ಸುರಪುರ ಸಂಸ್ಥಾನದಲ್ಲಿ ಕಂದಾಯ ವಸೂಲಿ ಮಾಡಿಕೊಡುವ ಗೌಡಕಿ ಮಾಡುವ ಹಾಲುಮತದ ಸಮುದಾಯದವರಿದ್ದರು. ಒಂದು ಸಲ ಸುರಪುರ ಸಂಸ್ಥಾನ ವ್ಯಾಪ್ತಿಯಲ್ಲಿ ಬರಗಾಲ ಬಂದಾಗ ಕಂದಾಯ ವಸೂಲಿ ಮಾಡಲು ಗೌಡಕಿ ಮನೆತನದವರಿಗೆ ಹೇಳುತ್ತಾರೆ. ಅವರು ಸಂಕಷ್ಟದಲ್ಲಿ ವಸೂಲಿ ಮಾಡಬಾರದೆಂದು ಹೇಳಿದಾಗ ಇವರ ಮಾತನ್ನು ಸರನಾಡಗೌಡರು ಒಪ್ಪದೆ ಹಾಲುಮತ ಗೌಡರನ್ನು ನಿಂದಿಸುತ್ತಾರೆ.ಇದರಿಂದ ಕುಪಿತಗೊಂಡ ಗೌಡಕಿಯವರು ಅವರನ್ನು ಹಾಳು ಹಗೆಯಲ್ಲಿ ಹಾಕಿ ಪಲಾಯನ ಮಾಡಿ ಹರದೊಳ್ಳಿಗೆ ಬಂದು ನೆಲೆಸಿದರು ಎಂದು ಹೇಳಲಾಗಿದ್ದು, ಆಗ ಅವರೆ ಹನಮಪ್ಪನ ಗುಡಿ ಕಟ್ಟಿಸಿದ್ದಾರೆಂದು ಸಂಶೋಧಕ ಭೀಮನಗೌಡ ಗೌಡರ ಹೇಳುತ್ತಾರೆ.
ಕಾರ್ತೀಕೋತ್ಸವ ಆರಂಭ: ದೀಪಾವಳಿ ಪಾಡ್ಯದ ದಿನದಂದು ಕಾರ್ತೀಕೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಒಟ್ಟು 22 ಇಲ್ಲವೇ 24 ದಿನ ಕಾರ್ತೀಕ ನಡೆಯುತ್ತದೆ. ಪ್ರತಿ ದಿನಕ್ಕೆ ಒಬ್ಬರಂತೆ ಬಾಬುದಾರರ ಮನೆತನದವರು ಕಾರ್ತೀಕೋತ್ಸವ ನಡೆಸಿಕೊಡುತ್ತಾರೆ. ಅಂದು ಪ್ರತಿದಿನ ಸಂಜೆ ಹನಮಪ್ಪನಿಗೆ ಡೊಳ್ಳು ವಿವಿಧ ವಾದ್ಯ ಮೇಳಗಳು, ಕಳಸದೊಂದಿಗೆ ಮೂರು ಸುತ್ತು ಸೇವೆ ಜರುಗುವುದು. ಕೊನೆಯ ಕಾರ್ತೀಕವು ಛಟ್ಟಿ ಅಮಾವಾಸ್ಯೆಗಿಂತ ಮುಂಚಿನ ಭಾನುವಾರ ಕೊನೆಯ ದಿನದ ಕಾರ್ತಿಕ ಹಾಗೂ ಜಾತ್ರಾ ಮಹೋತ್ಸವ ಜರುಗುತ್ತದೆ. ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.
ದಿಂಡಿರಕೆ ಮತ್ತು ವಿಶೇಷ ಪೂಜೆ: ಭಾನುವಾರ ಬೆಳಿಗ್ಗೆ ಅಭಿಷೇಕ, ವಿಶೇಷ ಪೂಜೆ ಜರುಗುವುದು. ಬೆಳಿಗ್ಗೆ 10 ಗಂಟೆಗೆ ಹನಮಪ್ಪ ದೇವರಿಗೆ ಹರಕೆ ಹೊತ್ತವರು ಐದು ಸುತ್ತು ಬರಿ ಮೈಯಲ್ಲಿ ದಿಂಡರಕಿ ಉರುಳು ಸೇವೆ ಮಾಡುತ್ತಾರೆ.
ಗಂಡಾರತಿ ಸೇವೆ: ಹರದೊಳ್ಳಿ ಹಾಗೂ ಸುತ್ತಮುತ್ತಲಿನ ಭಕ್ತರು ಮೂರನೂರಕ್ಕೂ ಹೆಚ್ಚು ಗಂಡಾರತಿಯನ್ನು ಹೊತ್ತು ಐದು ಸುತ್ತು ಸುತ್ತುತ್ತಾರೆ. ಜೊತೆಗೆ ಭಕ್ತರಿಂದ ಚುರಮರಿ ಹಾರಿಸುವ ಸೇವೆಯೂ ಜರುಗುತ್ತದೆ.
ನಾಟಕೋತ್ಸವ: ಮಾರುತೇಶ್ವರ ನಾಟ್ಯ ಸಂಘದವರು ಶನಿವಾರ, ಶ್ರೀರಾಮ ನಾಟ್ಯ ಸಂಘದವರು ಭಾನುವಾರ, ಆಂಜನೇಯ ನಾಟ್ಯ ಸಂಘದವರು ಸೋಮವಾರ, ದುರ್ಗಾದೇವಿ ನಾಟ್ಯ ಸಂಘದಿಂದ ಮಂಗಳವಾರ ಹೀಗೆ ನಾಲ್ಕು ನಾಟಕಗಳ ಪ್ರದರ್ಶನ ಜರುಗಲಿದೆ.
ವಿವಿಧ ಕಾರ್ಯಕ್ರಮಗಳು: ಜಾತ್ರಾ ಮಹೋತ್ಸವದ ನಿಮಿತ್ಯ ಕಬಡ್ಡಿ, ಟಗರಿನ ಕಾಳಗ, ಕ್ರಿಕೇಟ್ ಮುಂತಾದವುಗಳು ಜರುಗಲಿವೆ. ಜಾತ್ರೆಯ ನಂತರ ಪಾರಂಪರಿಕ ಓಕುಳಿ ಹಾಗೂ ನಂತರದ ಶನಿವಾರ ಗೌಡಕಿ ಮನೆತನದವರಿಂದ ಪಾಲಕಿ ಉತ್ಸವ ಹಾಗೂ ಕಾರ್ತೀಕ ಇಳಿಸುವ ಕಾರ್ಯಕ್ರಮ ಜರುಗುತ್ತದೆ.
ನಾಲ್ಕು ತಲೆಮಾರುಗಳಿಂದ ಹನಮಪ್ಪನ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಈ ಸೇವೆ ತೃಪ್ತಿ ತಂದಿದೆಹನಮಪ್ಪ ಹೊನ್ನಪ್ಪ ಪೂಜಾರಿ ದೇವಸ್ಥಾನದ ಪೂಜಾರಿ
ಹನಮಪ್ಪನ ದೇವಸ್ಥಾನಕ್ಕೆ ಪ್ರಾಚೀನ ಇತಿಹಾಸವಿದೆ. ಇಂದಿಗೂ ಜಾತ್ರೆಯ ವಿವಿಧ ಆಚರೆಗಳನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆಮಲ್ಲನಗೌಡ ಪಾಟೀಲ ಸ್ಥಳೀಯರು ಹರದೊಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.