ADVERTISEMENT

ಆರೋಗ್ಯ–ವೈದ್ಯಕೀಯ ಶಿಕ್ಷಣ ಒಂದುಗೂಡಲಿ: ಸಚಿವ ಬಿ.ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 15:22 IST
Last Updated 20 ಸೆಪ್ಟೆಂಬರ್ 2019, 15:22 IST

ಬಾಗಲಕೋಟೆ: ‘ರಾಜ್ಯದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕಾದರೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣವನ್ನು ಒಂದುಗೂಡಿಸಿ ಒಂದೇ ಇಲಾಖೆಯಡಿ ತರುವುದು ಅಗತ್ಯವಿದೆ‘ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಬಿ.ಶ್ರೀರಾಮುಲು ಪ್ರತಿಪಾದಿಸಿದರು.

ಇಲ್ಲಿನ ಬಿ.ವಿ.ವಿ ಸಂಘದ ಎಸ್‌.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ರಾಜ್ಯಮಟ್ಟದ ಪೆಥಾಲಜಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಆರೋಗ್ಯ ಇಲಾಖೆಯ ಬಳಿ ಆಸ್ಪತ್ರೆಗಳಿವೆ. ಆದರೆ ಅಲ್ಲಿ ಗುಣಮಟ್ಟದ ಚಿಕಿತ್ಸೆ ಕೊಡಬೇಕಾದರೆ, ವೈದ್ಯಕೀಯ ಕಾಲೇಜುಗಳ ನೆರವು ಬೇಕಿದೆ. ಈಗ ಅದು ಸಾಧ್ಯವಾಗುತ್ತಿಲ್ಲ. ಎರಡೂ ಇಲಾಖೆಗಳನ್ನು ಜೋಡಣೆ ಮಾಡಿದರೆ ಏನಾದರೂ ಸಾಧನೆ ಸಾಧ್ಯ. ಮುಂದಿನ ದಿನಗಳಲ್ಲಿ ಈ ಗೊಂದಲ ಯಾವ ರೀತಿ ಸರಿಪಡಿಸಬೇಕು ಎಂಬುದರ ಬಗ್ಗೆ ಸಮಾಲೋಚನೆ ಅಗತ್ಯವಿದೆ‘ ಎಂದರು.

ಸಚಿವರ ಮಾತಿಗೆ ಬೆಂಬಲ ವ್ಯಕ್ತಪಡಿಸಿದ ಶಾಸಕ ವೀರಣ್ಣ ಚರಂತಿಮಠ, ‘ಕೇಂದ್ರದಲ್ಲೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಒಂದೇ ಸಚಿವಾಲಯ ಹೊಂದಿವೆ. ಹಿಂದೆಯೂ ರಾಜ್ಯದಲ್ಲಿ ಅದೇ ರೀತಿ ಇತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ಸಂಪುಟದಲ್ಲಿ ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸಲು ಇಲಾಖೆಯನ್ನು ವಿಭಜಿಸಿದ್ದರು. ಹಿಂದೆ ಆಗಿರುವ ತಪ್ಪನ್ನು ಈಗ ಸರಿಪಡಿಸಬೇಕಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ’ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.