ADVERTISEMENT

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ | ಹೆಸ್ಕಾಂ ಅಧಿಕಾರಿಗಳು ಗೈರು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 7:53 IST
Last Updated 4 ಜನವರಿ 2026, 7:53 IST
ಹುನಗುಂದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ನೂರಂದಗೌಡ  ಕಲಗೋಡಿ ಮಾತನಾಡಿದರು
ಹುನಗುಂದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ನೂರಂದಗೌಡ  ಕಲಗೋಡಿ ಮಾತನಾಡಿದರು   

ಹುನಗುಂದ: ‘ವಿದ್ಯುತ್‌ ಗ್ರಾಹಕರ ಕುಂದುಕೊರತೆ ಸಭೆಗೆ ಹೆಸ್ಕಾಂ ಅಧಿಕಾರಿಗಳು ಬಾರದೆ ಲೈನ್‌ಮ್ಯಾನ್‌ಗಳನ್ನು ಕಳುಹಿಸುವುದು ಸರಿಯಲ್ಲ’ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ನೂರಂದಗೌಡ ಕಲಗೋಡಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶಗಳ ಸಾರ್ವಜನಿಕರಿಂದ ವಿದ್ಯುತ್‌ಗೆ ಸಂಬಂಧಿಸಿದ ದೂರುಗಳು ಹೆಚ್ಚಿನ ಪ್ರಮಾಣದಲ್ಲಿ ಸಲ್ಲಿಕೆಯಾಗುತ್ತಿವೆ. ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಲೆಂದು ಸಭೆಗೆ ಬರುತ್ತಾರೆ. ಅಧಿಕಾರಿಗಳು ಇರದಿದ್ದರೆ ಉತ್ತರ ಕೊಡುವವರು ಯಾರು? ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ನಡೆಯಬೇಕು’ ಎಂದರು.

ADVERTISEMENT

ಹುನಗುಂದ ಬಸ್ ಘಟಕದ ವ್ಯವಸ್ಥಾಪಕ ಅರವಿಂದ ಭಜಂತ್ರಿ ಮಾತನಾಡಿ, ‘ಘಟಕದಲ್ಲಿ ಬಸ್ ಕೊರತೆಯಿದೆ. ಈಗಾಗಲೇ ಇಳಕಲ್ ಘಟಕಕ್ಕೆ ಹೊಸ ಎಲೆಕ್ಟ್ರಿಕಲ್ ಬಸ್ ಬಂದಿದ್ದು, ಹುನಗುಂದ ಘಟಕಕ್ಕೆ ಕೊಟ್ಟಿಲ್ಲ’ ಎಂದು ಹೇಳಿದರು. ಈ ಬಗ್ಗೆ ಶಾಸಕರೊಂದಿಗೆ ಮಾತನಾಡುವುದಾಗಿ ಕಲಗೋಡಿ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುತ್ತಣ್ಣ ಅರಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಇದ್ದರು.

ಹುನಗುಂದ ತಾಲ್ಲೂಕು ಪಂಚಾಯತಿ ಸಭಾಭವನದಲ್ಲಿ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ನೂರಂದಗೌಡ (ಮುತ್ತಣ್ಣ) ಕಲಗೋಡಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು
‘ಗ್ಯಾರಂಟಿ: ಸಮಸ್ಯೆ ಪರಿಹರಿಸಿ’
-‘ಹೆಸ್ಕಾಂ ಎಇಇ ಈವರೆಗೆ ಸಭೆಗೆ ಹಾಜರಾಗಿಲ್ಲ. ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಕೊರತೆ ಉಂಟಾಗುತ್ತಿದೆ. ಅಮೀನಗಡ ಕಮತಗಿ ಹಾಗೂ ಹುನಗುಂದ ಪಟ್ಟಣ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರು ಕುಂದುಕೊರತೆ ಸಭೆ ಆಯೋಜಿಸಿ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಳಿಧರ ದೇಶಪಾಂಡೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.