
ರಬಕವಿ ಬನಹಟ್ಟಿ: ಸಮೀಪದ ಹಿಪ್ಪರಗಿ ಬ್ಯಾರೇಜ್‌ನ 22 ನೇ ಗೇಟ್‌ನಲ್ಲಿ ಹನ್ನೆರಡು ದಿನಗಳಾದರೂ ಗೇಟ್ ದುರಸ್ತಿ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆಗದೆ ಇರುವ ಪರಿಣಾಮವಾಗಿ ಸ್ಥಳೀಯ ಅಧಿಕಾರಿಗಳು ನೀರನ್ನು ತಡೆ ಹಿಡಿಯಲು ಸತತ ಪ್ರಯತ್ನ ಮಾಡುತ್ತಿದ್ದಾರೆ.
ಈಗ ನೀರು ಹರಿದು ಹೋಗದಂತೆ ದೊಡ್ಡ ದೊಡ್ಡ ಮರಳಿನ ಚೀಲಗಳನ್ನು ಅಳವಡಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದು, ಬೃಹತ್ ಕ್ರೇನ್ ಮೂಲಕ ಮರಳಿನ ಚೀಲಗಳನ್ನು ಅಳವಡಿಸುವ ಕಾರ್ಯ ನಡೆದಿದೆ.
ಆರಂಭದಲ್ಲಿ ಪ್ರತಿದಿನ ಒಂಬತ್ತು ಸಾವಿರ ಕ್ಯುಸೆಕ್ ನೀರು ಹರಿದು ಹೋಗಿತ್ತು. ಈಗ ನೂರು ಕ್ಯುಸೆಕ್‌ನಷ್ಟು ನೀರು ಹೋಗುತ್ತಿದೆ.
ಒಟ್ಟು 6 ಟಿಎಂಸಿ ಸಾಮರ್ಥ್ಯದ ಬ್ಯಾರೇಜ್‌ನಲ್ಲಿ ಗೇಟ್ ಕಿತ್ತು ಹೋದಾಗ 5.2 ಟಿಎಂಸಿ ನೀರಿನ ಸಂಗ್ರಹವಿತ್ತು. ಆದರೆ ಈಗ 2.5 ಕ್ಕಿಂತ ಹೆಚ್ಚು ಟಿಎಂಸಿ ನೀರು ಖಾಲಿಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ, ತೇರದಾಳ, ಮುಧೋಳ ಮತ್ತು ವಿಜಯಪುರ ಜಿಲ್ಲೆಯ ಅಥಣಿ, ಕುಡಚಿ ರಾಯಬಾಗ ತಾಲ್ಲೂಕಿನ ನೂರಕ್ಕೂ ಹೆಚ್ಚು ನಗರ ಮತ್ತು ಗ್ರಾಮೀಣ ಪ್ರದೇಶದ ಜನ ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಲಿದೆ. ಅದೇ ರೀತಿಯಾಗಿ ನದಿ ತೀರದ ತೋಟ ಮತ್ತು ಹೊಲಗಳಲ್ಲಿ ಬೆಳೆದ ಅಪಾರ ಪ್ರಮಾಣದ ಬೆಳೆಗಳಿಗೂ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.