
ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣ ಉದ್ಯಾನಗಿರಿಯಲ್ಲಿ ಡಿ.21 ರಿಂದ 23ರ ವರೆಗೆ ತೋಟಗಾರಿಕೆ ಮೇಳವನ್ನು ‘ಮೌಲ್ಯವರ್ಧನೆ ಮತ್ತು ರಪ್ತು ಅವಕಾಶಗಳಿಗಾಗಿ ನಿಖರ ತೋಟಗಾರಿಕೆ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ತೋವಿ.ವಿ ಕುಲಪತಿ ವಿಷ್ಣುವರ್ಧನ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೋಟಗಾರಿಕೆಯಲ್ಲಿ ವ್ಯಾಪಾರ ಉತ್ತೇಜಿಸಲು ರಪ್ತುದಾರರ ಮತ್ತು ಮಾರಾಟಗಾರರ ನಡುವಿನ ಮಾರುಕಟ್ಟೆ ಸಂಪರ್ಕ ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ. ತೋಟಗಾರಿಕೆ ತಂತ್ರಜ್ಞಾನಗಳು, ಮೌಲ್ಯವರ್ಧನೆ, ರಪ್ತು ಸಮಾವೇಶ ಮತ್ತು ಖರೀದಿದಾರ-ಮಾರಾಟಗಾರರ ಸಭೆ ಈ ಮೇಳದ ಪ್ರಮುಖ ಅಂಶಗಳಾಗಿದೆ’ ಎಂದರು.
‘ಮೇಳವು ತಂತ್ರಜ್ಞಾನ ಪ್ರಸರಣದ ಅತ್ಯಂತ ಪರಿಣಾಮಕಾರಿ ಕಾರ್ಯಕ್ರಮವಾಗಿದ್ದು, ಒಂದೇ ಸೂರಿನಡಿ ಪ್ರತಿ ವರ್ಷ ರೈತ ಸಮುದಾಯಕ್ಕೆ ನವೀನ, ಸಮಯೋಜಿತ ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡಲು ಮೇಳವನ್ನು ಆಯೋಜಿಸಲಾಗಿದೆ. ಸಾಧಕ ರೈತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಹಿರಿಯ ವಿಜ್ಞಾನಿಗಳು ಮತ್ತು ಪ್ರಗತಿಪರ ರೈತರೊಂದಿಗೆ ಸಂವಾದ ಏರ್ಪಡಿಸಲಾಗುತ್ತದೆ. ವಿಶ್ವವಿದ್ಯಾಲಯ ವ್ಯಾಪ್ತಿಯ 24 ಜಿಲ್ಲೆಗಳ 24 ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.
‘ಮೇಳದಲ್ಲಿ 400 ಮಳಿಗೆಗಳಿರಲಿವೆ. 10 ನರ್ಸರಿ ಮಳಿಗೆ, 10 ಜಾನುವಾರಗಳ ಪ್ರದರ್ಶನ ಮಳಿಗೆ ಹಾಗೂ 20 ಆಹಾರ ಮಳಿಗೆಗಳನ್ನು ಹಾಕಲಾಗುತ್ತಿದೆ. ಒಳಾಂಗಣ ಪ್ರದರ್ಶನದಲ್ಲಿ ವಿವಿಧ ದೇಶಿ, ವಿದೇಶಿ ಜಾತಿಯ ಹಣ್ಣು, ತರಕಾರಿ, ಹೂವಿನ ಬೆಳೆಗಳ ತಳಿಗಳು, ಬೀಜಗಳು ಮತ್ತು ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ. ವಿಶ್ವವಿದ್ಯಾಲಯದಲ್ಲಿ ಬೆಳೆದ ವಿವಿಧ ಸಸಿಗಳು, ಬೀಜಗಳು, ಜೈವಿಕ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು, ಪರಿಕರಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ’ ಎಂದರು.
‘ವಿಶೇಷ ಕ್ಷೇತ್ರ ಪ್ರಾತ್ಯಕ್ಷಿಕೆಗಳನ್ನು ಸಹ ಪ್ರದರ್ಶಿಸಲಾಗುತ್ತಿದೆ. 52 ತರಕಾರಿ ತಳಿಗಳ ಪ್ರಾತ್ಯಕ್ಷಿಕೆ, ಕೈತೋಟ, ಪೌಷ್ಟಿಕ ತೋಟ, 82 ಹೂವಿನ ತಳಿಗಳ ಪ್ರಾತ್ಯಕ್ಷಿಕೆ, ಔಷಧ, ಸುಗಂಧ ದ್ರವ್ಯ ಬೆಳೆಗಳಿಗೆ ಸಂಬಂಧಿಸಿದ 50 ಬೆಳೆಗಳ ಪ್ರಾತ್ಯಕ್ಷಿಕೆ, ಖುಷ್ಕಿ ತೋಟಗಾರಿಕೆ, ನೀರು ಸಂರಕ್ಷಣೆ ಹಾಗೂ ಬೇರು ಸಸಿ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳಿರಲಿವೆ ’ಎಂದು ಹೇಳಿದರು.
‘ಮೇಳದಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆಯ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಹಾರ್ಟಿ ಗೈಡ್ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ. ರೈತರು, ಸಾರ್ವಜನಿಕರು ಮೇಳದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.
ವಿಸ್ತರಣಾ ನಿರ್ದೇಶಕ ವೆಂಕಟೇಶಲು, ಸಂಶೋಧನಾ ನಿರ್ದೇಶಕ ಬಿ.ಫಕ್ರುದ್ದೀನ್ ಇದ್ದರು.
ತೋಟಗಾರಿಕೆ ಮೇಳಕ್ಕೆ ಚಾಲನೆ
ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಡಿ.21ರಂದು ಬೆಳಿಗ್ಗೆ 11ಕ್ಕೆ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಎನ್. ಚಲುವರಾಯಸ್ವಾಮಿ ಎಂ.ಬಿ. ಪಾಟೀಲ ಭಾಗವಹಿಸಲಿದ್ದು ವಿಜಯ ಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.