ADVERTISEMENT

PV Web Exclusive | ಬಾಗಲಕೋಟೆ: ಹೆದ್ದಾರಿಯೇ ಇಲ್ಲಿ ಹೊಳೆಗೆ ಹಾರ!

ವೆಂಕಟೇಶ್ ಜಿ.ಎಚ್
Published 3 ಸೆಪ್ಟೆಂಬರ್ 2020, 5:38 IST
Last Updated 3 ಸೆಪ್ಟೆಂಬರ್ 2020, 5:38 IST
ಗೋವನಕೊ‍ಪ್ಪ–ಕೊಣ್ಣೂರು ನಡುವೆ ಹೆದ್ದಾರಿಯನ್ನು ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ದುರಸ್ತಿ ಮಾಡಿರುವ ನೋಟ
ಗೋವನಕೊ‍ಪ್ಪ–ಕೊಣ್ಣೂರು ನಡುವೆ ಹೆದ್ದಾರಿಯನ್ನು ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ದುರಸ್ತಿ ಮಾಡಿರುವ ನೋಟ   
""

ಬಾಗಲಕೋಟೆ: ಊರು ಉಳಿಸಲು ಭಾಗೀರಥಿ ಕೆರೆಗೆ (ಆ)ಹಾರವಾದ ಜಾನಪದ ಕಥನ ಬಾಲ್ಯದಲ್ಲಿ ಕೇಳಿದ್ದೇವೆ. ಆದರೆ ಇದು ವಿಭಿನ್ನ ಕಥೆ. ಹೊಳೆಯ ಮುನಿಸಿನಿಂದ ತಮ್ಮೂರ ರಕ್ಷಿಸಿಕೊಳ್ಳಲು ಊರವರು ಸೇರಿ ರಾಷ್ಟ್ರೀಯ ಹೆದ್ದಾರಿಯನ್ನೇ ಬಲಿ ಕೊಡುವ ಸಂಗತಿ.

ಬಾದಾಮಿ ತಾಲ್ಲೂಕಿನ ಗೋವನಕೊಪ್ಪ, ನರಗುಂದ ತಾಲ್ಲೂಕಿನ ಕೊಣ್ಣೂರು ನಡುವೆ ಮಲಪ್ರಭೆ ಹರಿಯುತ್ತಾಳೆ. ಇಲ್ಲಿ ನದಿ ಭೌಗೋಳಿಕವಾಗಿ ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳನ್ನು ಪ್ರತ್ಯೇಕಿಸುತ್ತದೆ. ಈ ಎರಡು ಊರುಗಳ ಮೂಲಕ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ಹಾದು ಹೋಗುತ್ತದೆ. ಹೆದ್ದಾರಿ ಪ್ರಾಧಿಕಾರದವರು ಇಲ್ಲಿಯೇ ಮಲಪ್ರಭಾ ನದಿಗೆ ಅಡ್ಡಲಾಗಿ ಮೂರು ವರ್ಷಗಳ ಹಿಂದೆ 200 ಮೀಟರ್ ಉದ್ದದ ಬೃಹತ್ ಸೇತುವೆ ಕಟ್ಟಿದ್ದಾರೆ. ಅದಕ್ಕೆ ₹43 ಕೋಟಿ ವ್ಯಯಿಸಿದ್ದಾರೆ. ವಿಶೇಷವೆಂದರೆ ಅದೇ ಸೇತುವೆ ಈಗ ಹೆದ್ದಾರಿಯನ್ನು ಪದೇ ಪದೇ ನದಿಗೆ (ಆ)ಹಾರವಾಗಿಸುತ್ತಿದೆ.

ಸವದತ್ತಿಯ ನವಿಲುತೀರ್ಥ ಜಲಾಶಯದಿಂದ ಮಲಪ್ರಭೆಗೆ ನೀರು ಹರಿದು ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದಂತೆಯೇ ಕೊಣ್ಣೂರು ಗ್ರಾಮಸ್ಥರು ಕಾರ್ಯೋನ್ಮುಖರಾಗುತ್ತಾರೆ. ಸಲಿಕೆ, ಹಾರೆ, ಪಿಕಾಸಿ ಹಿಡಿದು ಬರುತ್ತಾರೆ. ಜೊತೆಗೆ ಜೆಸಿಬಿ ಯಂತ್ರದ ಸಾಥ್. ನೇರ ರಾಷ್ಟ್ರೀಯ ಹೆದ್ದಾರಿಗೆ ಬಂದವರೇ ಅದನ್ನು ಅಗೆದು ತಗ್ಗು ತೋಡುತ್ತಾರೆ. ತಮ್ಮೂರಿನತ್ತ ಮುಖ ಮಾಡಿದ ಹೊಳೆಯ ನೀರಿನ ದಿಕ್ಕು ಬದಲಿಸುತ್ತಾರೆ. ಈ ರಸ್ತೆಯ ಹನನ ಕಾರ್ಯಕ್ಕೆ ಈಚೆ ದಡದ ಗೋವನಕೊಪ‍್ಪದವರು ನೆರವಾಗುತ್ತಾರೆ. ಹಿಂದೆಯೇ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳ್ಳುತ್ತದೆ.

ADVERTISEMENT

ಹೀಗೆ ಹೆದ್ದಾರಿಯನ್ನು ಹೊಳೆಗೆ ಆಹಾರವಾಗಿಸಿ ಊರು ಉಳಿಸಿಕೊಳ್ಳುವ ಕಾರ್ಯ ಕಳೆದೊಂದು ವರ್ಷದಿಂದ ನಡೆಯುತ್ತಿದೆ. ಈಬಗ್ಗೆ ಮೊದಲೇ ಮಾಹಿತಿ ಇರುವ ಕಾರಣ ಪೊಲೀಸರೇ ಈ ಕಾರ್ಯಕ್ಕೆ ಬೆಂಗಾವಲಿಗೆ ನಿಲ್ಲುತ್ತಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಇಲ್ಲಿ ಮೂಕ ಪ್ರೇಕ್ಷಕರು.

ಜೆಸಿಬಿ ಯಂತ್ರ ಬಳಸಿ ರಸ್ತೆ ತಗ್ಗು ತೋಡುತ್ತಿರುವುದು

ಮೊದಲು ಬ್ರಿಟಿಷರ ಕಾಲದ ಹಳೆಯ ಸೇತುವೆ ಇತ್ತು. ಆಗ ಎಂತಹ ಪ್ರವಾಹ ಬಂದರೂ ಊರಿಗೆ ನೀರು ನುಗ್ಗಿರಲಿಲ್ಲ. ಈಗ ಹೊಸ ಸೇತುವೆ ಆದ ಮೇಲೆ ಸಮಸ್ಯೆ ಬಿಗಡಾಯಿಸಿದೆ. ನೀರಿನ ಸಹಜ ಹರಿವಿಗೆ ಎದುರಾಗಿ ಸೇತುವೆ ಗೋಡೆಗಳ ಕಟ್ಟಿದ್ದಾರೆ. ಇದೊಂದು ಅವೈಜ್ಞಾನಿಕ ನಿರ್ಮಾಣ.ಹೀಗಾಗಿಯೇ ಹೊಳೆ ಇಲ್ಲಿ ತನ್ನ ಪಥ ಬದಲಿಸಿ ಊರೊಳಗೆ ನುಗ್ಗಿ ಹಾವಳಿ ಮಾಡುತ್ತಿದೆ ಎಂಬುದು ಕೊಣ್ಣೂರು ಗ್ರಾಮಸ್ಥರ ಆರೋಪ.

ಕಳೆದ ವರ್ಷ ವಾರಗಟ್ಟಲೇ ಇಡೀ ಊರು ಜಲಾವೃತವಾಗಿತ್ತು. ಮನೆಗಳು ಬಿದ್ದು ತೀವ್ರ ಸಂಕಷ್ಟ ಎದುರಾಗಿತ್ತು. ಹೆದ್ದಾರಿ ಪ್ರಾಧಿಕಾರದವರೇ ಈ ಅವಾಂತರ ಸೃಷ್ಟಿಸಿದ್ದು, ಅವರೇ ಇದನ್ನು ಪರಿಹರಿಸಬೇಕು. ಅಲ್ಲಿಯವರೆಗೂ ರಸ್ತೆ ಅಗೆದು ಊರು ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಸ್ಥಳೀಯರಾದ ಪ್ರವೀಣ ಮೇಟಿ ಹೇಳುತ್ತಾರೆ.

ನಮ್ಮದೇನೂ ತಪ್ಪಿಲ್ಲ.. ಸೇತುವೆ ಸರಿಯಾಗಿಯೇ ಇದೆ. ಜಲಸಂಪನ್ಮೂಲ ಇಲಾಖೆಯ ಟೊಪೊಶೀಟ್‌ನಲ್ಲಿ ಮಲಪ್ರಭಾ ನದಿ ಅಗಲ ಇಲ್ಲಿ 200 ಮೀಟರ್ ಇದೆ. ಆದರೆ ಒತ್ತುವರಿ ಪರಿಣಾಮ ಅದು 14 ಮೀಟರ್‌ಗೆ ಕುಗ್ಗಿದೆ. ಹೀಗಾಗಿ ಮಳೆಗಾಲದಲ್ಲಿ ನದಿ ತನ್ನ ನೈಜ ಪಾತ್ರ ಕಂಡುಕೊಂಡು ಅಕ್ಕಪಕ್ಕದ ಜನವಸತಿಗೆ ನುಗ್ಗುತ್ತದೆ. ಅದನ್ನು ತಪ್ಪಿಸಲು ಊರಿನವರೆಗೂ ಸೇತುವೆ ವಿಸ್ತರಣೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ.

ಹೊಳೆಯಲ್ಲಿ ನೆರೆ ಇಳಿದ ಮೇಲೆ ಮತ್ತೆ ಹೆದ್ದಾರಿ ಪ್ರಾಧಿಕಾರದವರೇ ಗ್ರಾಮಸ್ಥರು ತೋಡಿದ ತಗ್ಗಿಗೆ ಮಣ್ಣು ತುಂಬಿ, ರೋಲ್ ಮಾಡಿ ಮತ್ತೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಮಳೆ ಬಂದು ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಗಲೆಲ್ಲಾ ಈ ಪ್ರಕ್ರಿಯೆ ಮರುಕಳಿಸುತ್ತಲೇ ಇದೆ.

ಹೆದ್ದಾರಿಪದೇ ಪದೇ ಹೊಳೆಗೆ ಆಹಾರವಾಗುವ ಕಾರಣ ಅದರ ಶಾಶ್ವತ ದುರಸ್ತಿಗೆ ಹೆದ್ದಾರಿ ಪ್ರಾಧಿಕಾರ ಮನಸು ಮಾಡುತ್ತಿಲ್ಲ. ಬದಲಿಗೆ ಮಣ್ಣು ಹಾಕಿ ತಾತ್ಕಾಲಿಕ ಕಾಮಗಾರಿ ನಡೆಸುತ್ತಾರೆ. ವಾಹನ ಸವಾರರು ಸೇತುವೆ ದಾಟಲು ವರ್ಷವಿಡೀ ಸರ್ಕಸ್ ಮಾಡಬೇಕಿದೆ.ಗ್ರಾಮಸ್ಥರು ಹಾಗೂ ಹೆದ್ದಾರಿ ಪ್ರಾಧಿಕಾರದ ಜಟಾಪಟಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪಡಿಪಾಟಲು ತಂದಿಟ್ಟಿದೆ. ಮಳೆಗಾಲದಲ್ಲಿ ವಾರಗಟ್ಟಲೇ ಸಂಚಾರ ಬಂದ್ ಆಗಿ ರಸ್ತೆಯಲ್ಲಿಯೇ ಕಾಲ ಕಳೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.