ADVERTISEMENT

ವರ್ಷಾಂತ್ಯ: ಬಾದಾಮಿ ಬಸದಿಯಲ್ಲಿ ಪ್ರವಾಸಿಗರ ದಂಡು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 4:58 IST
Last Updated 22 ಡಿಸೆಂಬರ್ 2025, 4:58 IST
ಬಾದಾಮಿ ಗುಹಾಂತರ ದೇವಾಲಯಗಳನ್ನು ಪ್ರವಾಸಿಗರು ಸಂಭ್ರಮದಿಂದ ವೀಕ್ಷಿಸಿದರು
ಬಾದಾಮಿ ಗುಹಾಂತರ ದೇವಾಲಯಗಳನ್ನು ಪ್ರವಾಸಿಗರು ಸಂಭ್ರಮದಿಂದ ವೀಕ್ಷಿಸಿದರು   

ಬಾದಾಮಿ: ದಕ್ಷಿಣ ಬೆಟ್ಟದ ಗುಹಾಂತರ ದೇವಾಲಯಗಳ ಸಮುಚ್ಚಯ, ಉತ್ತರ ಬೆಟ್ಟದ ವಾತಾಪಿ ಗುಡಿ, ವಿಷ್ಣು ಗುಡಿ, ಮ್ಯುಜಿಯಂ ಮತ್ತು ಉತ್ತರದ ಭೂತನಾಥ ದೇವಾಲಯ ಸಂಕೀರ್ಣ, ಅಗಸ್ತ್ಯತೀರ್ಥ ಕೆರೆ ವೀಕ್ಷಣೆಗೆ ಪ್ರವಾಸಿಗರು ಲಗ್ಗೆ ಹಾಕಿದ್ದರು.

ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುವರು. ಭಾನುವಾರ ರಜೆ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ವರ್ಗದವರು, ಸ್ನೇಹಿತರು ಮತ್ತು ಶಿಕ್ಷಕರೊಂದಿಗೆ ಮಕ್ಕಳು ಆಗಮಿಸಿ ಸ್ಮಾರಕಗಳಲ್ಲಿನ ಮೂರ್ತಿ ಶಿಲ್ಪಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

ಚಾಲುಕ್ಯರ ಐತಿಹಾಸಿಕ ಸ್ಮಾರಕಗಳಾದ ಪಟ್ಟದಕಲ್ಲು, ಐಹೊಳೆ, ಮಹಾಕೂಟ, ನಾಗನಾಥಕೊಳ್ಳ, ಹುಲಿಗೆಮ್ಮನಕೊಳ್ಳ, ಧಾರ್ಮಿಕ ಪುಣ್ಯಕ್ಷೇತ್ರಗಳಾದ ಬನಶಂಕರಿ ಮತ್ತು ಶಿವಯೋಗಮಂದಿರಕ್ಕೆ ಪ್ರವಾಸಿಗರು ಭೇಟಿ ನೀಡಿದರು.

ADVERTISEMENT

ಅಂಬೇಡ್ಕರ್ ವೃತ್ತದಲ್ಲಿ ನಿತ್ಯ ಪ್ರವಾಸಿಗರ ವಾಹನ ಮತ್ತು ಆಟೊಗಳಿಂದ ಕೆಲ ಕಾಲ ಗದಗ-ಬಾಗಲಕೋಟೆ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಮೇಣಬಸದಿಗಿಂತ ಭೂತನಾಥ ದೇವಾಲಯ ಮತ್ತು ಮ್ಯುಜಿಯಂ ಕಡೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಇದ್ದದ್ದು ಕಂಡು ಬಂದಿತು.

ಆಟೊ ಚಾಲಕರು ಅಂಬೇಡ್ಕರ್ ವೃತ್ತದಲ್ಲಿ ಪ್ರವಾಸಿಗರಿಗೆ ಮೇಣಬಸದಿಯಲ್ಲಿ ಪಾರ್ಕಿಂಗ್ ಭರ್ತಿಯಾಗಿದೆ. ಕಾರ್ ನಿಲ್ಲಿಸಲು ಜಾಗವಿಲ್ಲ ಗಾಡಿ ಇಲ್ಲಿಯೇ ನಿಲ್ಲಿಸಿ ಎಂದು ಹೇಳುವರು. ಭೂತನಾಥ ದೇವಾಲಯ ಮತ್ತು ಅಗಸ್ತ್ಯತೀರ್ಥ ಹೊಂಡಕ್ಕೆ ಹೆಚ್ಚಿನ ಹಣ ಪಡೆದು ಪ್ರವಾಸಿಗರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆಟೊ ಚಾಲಕರಿಗೆ ದರದ ಬಗ್ಗೆ ಕಡಿವಾಣ ಹಾಕುವವರು ಯಾರು ಇಲ್ಲದಂತಾಗಿದೆ. ಮೇಣಬಸದಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಪ್ರವಾಸಿ ಮಾರ್ಗದರ್ಶಿಗಳು ಹೇಳಿದರು.

ಆಟೊ ಚಾಲಕರಿಗೆ ಭೂತನಾಥ ದೇವಾಲಯ, ಮೇಣಬಸದಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ಹುಲಿಗೆಮ್ಮನಕೊಳ್ಳ, ನಾಗನಾಥಕೊಳ್ಳ , ಶಿವಯೋಗಮಂದಿರ ಮತ್ತು ಬನಶಂಕರಿ ದೇವಾಲಯಕ್ಕೆ ಹೋಗಲು ಸಂಬಂಧಿಸಿದ ಅಧಿಕಾರಿಗಳು ದರವನ್ನು ನಿಗದಿ ಮಾಡಬೇಕಿದೆ.

‘ಮೇಣಬಸದಿಯಿಂದ ಮ್ಯುಜಿಯಂಗೆ ಹೋಗಲು ಅರ್ಧ ಕಿ.ಮೀ. ರಸ್ತೆಗೆ ₹500 ಪಡೆಯುತ್ತಾರೆ. ಅಧಿಕಾರಿಗಳು ಆಟೊ ದರವನ್ನು ನಿಗದಿ ಮಾಡಬೇಕು’ ಎಂದು ತುಮಕೂರು ಪ್ರವಾಸಿ ಸಚ್ಚಿದಾನಂದ ಹೇಳಿದರು.

ಬಾದಾಮಿಯಲ್ಲಿ ನವೆಂಬರ್‌ ತಿಂಗಳು ಸ್ವದೇಶಿ 35,761 ಪ್ರವಾಸಿಗರಿಂದ ₹8,94,025, 744 ವಿದೇಶಿ ಪ್ರವಾಸಿಗರಿಂದ ₹2,23,200 ಹಣ ಮತ್ತು ಪಟ್ಟದಕಲ್ಲಿನಲ್ಲಿ 22,479 ಸ್ವದೇಶಿ ಪ್ರವಾಸಿಗರಿಂದ ₹8,99,160, 570 ವಿದೇಶಿ ಪ್ರವಾಸಿಗರಿಂದ ₹3,42,000 ಹಣ ಸಂಗ್ರಹವಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.

‘ಪ್ರವಾಸಿಗರಿಗೆ ಸ್ಮಾರಕಗಳನ್ನು ವೀಕ್ಷಿಸಲು ಫ್ರೀ ಪೇಡ್ ಆಟೊ ಮಾಡಲು ಜಿಲ್ಲಾಧಿಕಾರಿ ಸಭೆಯಲ್ಲಿ ಚರ್ಚಿಸಲಾಗಿದೆ. ಮ್ಯುಜಿಯಂ ಸಮೀಪ ಮೂತ್ರಾಲಯವಿದೆ ಪ್ರವಾಸಿಗರು ಉಪಯೋಗಿಸಬಹುದು ಎಂದು ’ ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ಪ್ರತಿಕ್ರಿಯಿಸಿದರು.

ವಿಶ್ವಪರಂಪರೆ ತಾಣ ಪಟ್ಟದಕಲ್ಲಿನಲ್ಲಿ ಮಕ್ಕಳು ಮತ್ತು ಪ್ರವಾಸಿಗರು ದೇವಾಲಯವನ್ನು ವೀಕ್ಷಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.