ADVERTISEMENT

ಹುನಗುಂದ| ಕೆಲವರಿಂದ ತತ್ವ– ಸಿದ್ಧಾಂತಗಳಿಗೆ ತಿಲಾಂಜಲಿ: ಚನ್ನಬಸವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 2:36 IST
Last Updated 14 ಜನವರಿ 2026, 2:36 IST
ಹುನಗುಂದ ತಾಲ್ಲೂಕಿನ ಹೂವನೂರು ಗ್ರಾಮದ ಬಸವಾತ್ಮಜೆ ವೇದಿಕೆಯಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ಶರಣ ಮೇಳವನ್ನು ಚಿಕ್ಕಮಗಳೂರಿನ ಜಯಬಸವಾನಂದ ಸ್ವಾಮೀಜಿ ಉದ್ಘಾಟಿಸಿದರು
ಹುನಗುಂದ ತಾಲ್ಲೂಕಿನ ಹೂವನೂರು ಗ್ರಾಮದ ಬಸವಾತ್ಮಜೆ ವೇದಿಕೆಯಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ಶರಣ ಮೇಳವನ್ನು ಚಿಕ್ಕಮಗಳೂರಿನ ಜಯಬಸವಾನಂದ ಸ್ವಾಮೀಜಿ ಉದ್ಘಾಟಿಸಿದರು   

ಹುನಗುಂದ: ಲಿಂಗಾನಂದ ಸ್ವಾಮೀಜಿ ಮತ್ತು ಮಾತಾಜಿ (ಮಾತೆ ಮಹಾದೇವಿ) ಅವರು ಬಸವ ಧರ್ಮದ ಪುನರುತ್ಥಾನ ಮಾಡಿದರು. ಆದರೆ ಕೆಲವರು ಅವರ ತತ್ವ–ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದ್ದಾರೆ ಎಂದು ತಮ್ಮ ವಿರೋಧಿಗಳನ್ನು ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಟೀಕಿಸಿದರು.

ಮಂಗಳವಾರ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಹತ್ತಿರ ಹೂವನೂರು ಗ್ರಾಮದಲ್ಲಿ ಬಸವಾತ್ಮಜೆ ವೇದಿಕೆಯಲ್ಲಿ ಆಯೋಜಿಸಿದ್ದ 4ನೇ ಸ್ವಾಭಿಮಾನಿ ಶರಣ ಮೇಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಧರ್ಮ ಗ್ರಂಥವನ್ನು ಮಾತಾಜಿ ಬರೆದು ಇಟ್ಟಿದ್ದಾರೆ .ಅದನ್ನು ಬಿಡುಗಡೆ ಮಾಡಬೇಕು ಎಂಬುದು ನಮ್ಮ ಆಶಯ. ವಚನ ಸಾಹಿತ್ಯದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ. ಅದನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ADVERTISEMENT

ಸ್ವಾಭಿಮಾನಿ ಶರಣ ಮೇಳ ಉದ್ಘಾಟಿಸಿದ ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಜಯಬಸವಾನಂದ ಸ್ವಾಮೀಜಿ ಮಾತನಾಡಿ, ‘ಚನ್ನಬಸವಾನಂದ ಸ್ವಾಮೀಜಿ ವಿಶ್ವದಾದ್ಯಂತ ಬಸವ ತತ್ವ ಪ್ರಚಾರ ಮಾಡುತ್ತಿದ್ದಾರೆ. ಹತ್ತಾರು ದೇಶಗಳಿಗೆ ಹೋಗಿ ಸ್ಥಳೀಯರನ್ನು ಕೂಡಿಸಿ ಲಿಂಗಾಯತ ಧರ್ಮದ ದೀಕ್ಷೆ ನೀಡಿದ್ದಾರೆ. ಶರಣ ಮೇಳಗಳು ಶರಣರ ಅಧ್ಯಾತ್ಮ ಸಂತೆ ಇದ್ದಂತೆ. ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ಕೊನೆ ಎಂಬುದಿಲ್ಲ ಎಂದರು.

ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ ಮಾತನಾಡಿ, ‘ನಿಜವಾದ ಬಸವ ಮಾರ್ಗ ಸ್ವಾಭಿಮಾನಿ ಶರಣ ಮೇಳ. ನಾವು ನೀವೆಲ್ಲಾ ಸ್ವ ಪ್ರತಿಷ್ಠೆ ಮರೆತು ಬಸವ ತತ್ವ ಪ್ರಚಾರ ಮಾಡಿ ಲಿಂಗಾನಂದ ಅಪ್ಪಾಜಿ ಮತ್ತು ಮಾತಾಜಿ ಅವರ ಸಂಕಲ್ಪ ಪೂರೈಸೋಣ’ ಎಂದರು.

ಸಿಂದಗಿ ಪ್ರಭುಲಿಂಗ ಸ್ವಾಮೀಜಿ ಮಾತನಾಡಿದರು.

ತೆಲಂಗಾಣದ ಬಸವೇಶ್ವರ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಬಸವಶ್ರೀ ಅಶೋಕ ಶೀಲವಂತ ದಂಪತಿ ಗುರುಬಸವ ಪೂಜೆ ನೆರವೇರಿಸಿದರು

ಚಿಕ್ಕಮಗಳೂರ ರಾಷ್ಟ್ರೀಯ ಬಸವ ದಳದ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.

ಚಳ್ಳಕೆರೆ ಹಡಪದ ಅಪ್ಪಣ್ಣ ಮಹಾಮಠದ ಗುರು ಸ್ವಾಮೀಜಿ, ವಚನಶ್ರೀ ಮಾತಾಜಿ, ಲಿಂಗಾನಂದ ಸ್ವಾಮೀಜಿ, ಬೀದರ ಶಿವರಾಜ ಪಾಟೀಲ ಅತಿವಾಳ, ಬಸವಂತಪ್ಪ ಬಿರಾದಾರ, ರವಿಕಾಂತ ಬಿರಾದಾರ ಇದ್ದರು. ಅಶೋಕ ಬೆಂಡಿಗೇರಿ ಸ್ವಾಗತಿಸಿದರು. ಜಗದೇವಿ ಚಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಹುನಗುಂದ ತಾಲ್ಲೂಕಿನ ಹೂವನೂರು ಗ್ರಾಮದ ಬಸವಾತ್ಮಜೆ ವೇದಿಕೆಯಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ಶರಣ ಮೇಳದಲ್ಲಿ ಶರಣ ಹಾಗೂ ಶರಣೆಯರು ವಚನ ಪ್ರಾರ್ಥಿಸಿದರು
ಲಿಂಗಾನಂದ ಸ್ವಾಮೀಜಿ ಮತ್ತು ಮಾತಾಜಿ ಎರಡು ಕಣ್ಣುಗಳ ಸ್ವರೂಪದಲ್ಲಿ ಶರಣ ಮೇಳಗಳು ನಡೆಯುತ್ತಿವೆ
ಜಯಬಸವಾನಂದ ಸ್ವಾಮೀಜಿ ವಿಶ್ವಧರ್ಮ ಪೀಠ ಚಿಕ್ಕಮಗಳೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.