ADVERTISEMENT

ರಂಗಭೂಮಿಗೆ ಹುನಗುಂದ ಸಹಕಾರ ದೊಡ್ಡದು: ಎಸ್ಕೆ ಕೊನೆಸಾಗರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 2:56 IST
Last Updated 1 ಡಿಸೆಂಬರ್ 2025, 2:56 IST
ಹುನಗುಂದದ ಗಚ್ಚಿನಮಠದ ಮುರುಘೇಂದ್ರ ಶ್ರೀಗಳ 60ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಿ.ಬಿ.ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಮಾತನಾಡಿದರು
ಹುನಗುಂದದ ಗಚ್ಚಿನಮಠದ ಮುರುಘೇಂದ್ರ ಶ್ರೀಗಳ 60ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಿ.ಬಿ.ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಮಾತನಾಡಿದರು   

ಹುನಗುಂದ: ‘ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ನಗರದಲ್ಲಿ ನಾಟಕ ಅಭಿನಯ ಮತ್ತು ರಂಗಭೂಮಿ ಚಟುವಟಿಕೆಗಳು ನಡೆಯುತ್ತಾ ಬಂದಿವೆ. ಅದರಲ್ಲೂ ವೃತ್ತಿ ನಾಟಕಗಳ ಸುಗ್ಗಿಯೇ ತಿಂಗಳಾನುಗಟ್ಟಲೇ ಇಲ್ಲಿ ನಡೆಯುತ್ತಿತ್ತು’ ಎಂದು ಪಿ.ಬಿ.ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಹೇಳಿದರು.

ನಗರದ ಗಚ್ಚಿನಮಠದ ಮುರುಘೇಂದ್ರ ಶ್ರೀಗಳ 60ನೇ ಪುಣ್ಯಸ್ಮರಣೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ರಾಮಚಂದ್ರ ದೋಟಿಹಾಳ, ಕಲ್ಯಾಣಪ್ಪ ಬ್ಯಾಳಿ, ದಾನಪ್ಪ ರಾಜಮನಿ, ಟಿ.ಕೆ.ಮಹಮ್ಮದ್ಅಲಿ, ಲಾಡ್ಜಿ ನಾಯಕ ಅವರ ನಾಟಕಗಳು ಇಲ್ಲಿಯ ಅನೇಕ ತಂಡಗಳಿಂದ ಪ್ರದರ್ಶನ ಆಗುತ್ತಿದ್ದವು. ಜಾತ್ರೆ, ಉತ್ಸವ ಸೇರಿದಂತೆ ಇತರ ಸಂದರ್ಭಗಳಲ್ಲಿ ನಾಟಕಗಳು ಪರಸ್ಪರ ಸ್ಪರ್ಧಾತ್ಮಕವಾಗಿದ್ದವು’ ಎಂದರು.

ADVERTISEMENT

‘ಸುಮಾರು ಒಂದು ಶತಮಾನದಿಂದ ನಗರದಲ್ಲಿ ರಂಗ ಚಟುವಟಿಕೆಗಳು ನಿರಂತರವಾಗಿವೆ. 80ರ ದಶಕದಿಂದ ವಿವೇಕಾನಂದ ಹಾಬಿಯುಥ್ ಕ್ಲಬ್, ಅರುಣೋದಯ ಕಲಾವೃಂದ, ಚೇತನಾ ಕಲಾಕ್ಷೇತ್ರ, ಗುರುರಾಜ ಭಜನಾ ಮಂಡಳಿ, ರಂಗಮಿತ್ರರು, ಧ್ರುವರಂಗ, ಸ್ಪಂದನ, ಹೊಸಬ, ಹವ್ಯಾಸಿ ನಾಟಕ ಕಂಪನಿ, ಹೀಗೆ ಹತ್ತಾರು ಹವ್ಯಾಸಿ ತಂಡಗಳು ನಡೆಸುವ ರಂಗಭೂಮಿ ಕಾರ್ಯಕ್ರಮಗಳು ಜನಮನ ಸೂರೆಗೊಂಡಿವೆ. ರಂಗಭೂಮಿಗೆ ನಗರದ ಜನತೆಯ ಸಹಕಾರ ದೊಡ್ಡದು. ಆದರೆ ಈವರೆಗೂ ಹುನಗುಂದದಲ್ಲಿ ಸುಸಜ್ಜಿತ ರಂಗಮಂದಿರ ಇಲ್ಲದ ಕೊರಗು ರಂಗ ಸಂಘಟಕರನ್ನು ಕಾಡುತ್ತಿದೆ. ಈ ದಿಸೆಯಲ್ಲಿ ಮುಖಂಡರು, ಜನಪ್ರತಿನಿಧಿಗಳು ಮತ್ತು ಸರ್ಕಾರ ಗಮನಹರಿಸಬೇಕು’ ಎಂದು ತಿಳಿಸಿದರು.

ಅಮರೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಹಾಲುಮತ ಸಮಾಜದ ದಾಸೋಹಿಗಳನ್ನು ಸತ್ಕರಿಸಲಾಯಿತು. ಶಿವಗಂಗಾ ರಂಜಣಗಿ ಸ್ವಾಗತಿಸಿದರು, ಗೀತಾ ತಾರಿವಾಳ ವಂದಿಸಿದರು, ಪ್ರಭು ಮಾಲಗಿತ್ತಿಮಠ ನಿರೂಪಿಸಿದರು.

ಹುನಗುಂದದ ಗಚ್ಚಿನಮಠದ ಮುರುಘೇಂದ್ರ ಶ್ರೀಗಳ 60ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಿ.ಬಿ.ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಅವರನ್ನು ಸನ್ಮಾನಿಸಿದರು