ಹುನಗುಂದ ತಾಲ್ಲೂಕಿನ ನಾಗೂರು ಗ್ರಾಮದಲ್ಲಿ ನಿರಂತರವಾಗಿ ಸುರಿದ ಮಳೆಗೆ ತೊಗರಿ ಬೆಳೆ ಹಾಳಾಗಿದೆ
ಹುನಗುಂದ: ಕಳೆದ ಒಂದು ವಾರದಿಂದ ತಾಲ್ಲೂಕಿನಾದ್ಯಂತ ನಿರಂತರ ಮಳೆ ಸುರಿಯುತ್ತಿರುವುದರಿಂದ ಬೆಳೆಗಳು ತತ್ತರಿಸಿ ಹೋಗಿವೆ.
ಈ ಬಾರಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 26.579 ಹೆಕ್ಟರ್ ಪ್ರದೇಶದಲ್ಲಿ ತೊಗರಿ, ಹೆಸರು, ಗೋವಿನಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿತ್ತು. ಬಿತ್ತನೆ ಪೂರ್ವ ಮತ್ತು ನಂತರ ದಿನಗಳಲ್ಲಿ ಉತ್ತಮ ಮಳೆ ಆಗಿತ್ತು.
ತಾಲ್ಲೂಕಿನಲ್ಲಿ ಒಂದು ವಾರದಲ್ಲಿ 2.5 ಸೆಂ.ಮೀ ವಾಡಿಕೆ ಮಳೆ ಆದರೆ 13.3 ಸೆಂ ಮೀ ರಷ್ಟು ಹೆಚ್ಚು ಮಳೆ ಆಗಿದೆ. ಆಗಸ್ಟ್ 5 ರಿಂದ 11 ರವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ.
ಮುಂಗಾರು ಹಂಗಾಮಿನ ಪ್ರಮುಖ ಬೆಳೆ ಹೆಸರು. ಬಹುತೇಕ ಹೆಸರು ಬೆಳೆ ಕಟಾವಿಗೆ ಬಂದಿದೆ. ನಿರಂತರ ಮಳೆ ಸುರಿದ ಪರಿಣಾಮ ಹೆಸರು ಬುಡ್ಡಿ (ಕಾಯಿ) ಯನ್ನು ಬಿಡಿಸಿ ರಾಶಿ ಮಾಡಲಾಗದ ಪರಿಸ್ಥಿತಿ ರೈತರಿಗೆ ಬಂದಿದೆ.
ನಿರಂತರ ಮಳೆ ಜೊತೆಗೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಕೆಲವೆಡೆ ತೊಗರಿ ಬೆಳೆ ಹಳದಿಯಾಗುತ್ತಿದೆ ಜೊತೆಗೆ ಸಿಡಿ ರೋಗಕ್ಕೆ ತುತ್ತಾಗಿ ಹಾಳಾಗಿದೆ.
ಇದೇ ರೀತಿ ಸೂರ್ಯಕಾಂತಿ ಬೆಳೆ ಬಹುತೇಕ ಹೂವು ಬಿಟ್ಟಿದೆ. ಆದರೆ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಹೂವು ಬಿಟ್ಟ ಸೂರ್ಯಕಾಂತಿ ಪರಾಗ (ಹಳದಿ ಪೌಡರ್ ) ನಷ್ಟದಿಂದ ಕಾಳು ಸರಿಯಾಗಿ ಕಟ್ಟದಿದ್ದರೆ ಇಳುವರಿ ಕುಂಠಿತಗೊಳ್ಳಬಹುದು ಎಂಬ ಭಯ ರೈತರನ್ನು ಕಾಡುತ್ತಿದೆ.
ಹೆಚ್ಚಿನ ಮಳೆಯಿಂದಾಗಿ ಕೆಲವು ರೈತರ ಹೊಲಗಳು ಕೆಸರು ಗದ್ದೆಯಂತೆ ಭಾಸವಾಗುತ್ತಿವೆ ಜೊತಗೆ ಒಡ್ದು ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಬೆಳೆಗಳು ನೀರಿಗೆ ಆಹುತಿಯಾಗಿವೆ. ಇದೇ ರೀತಿ ಮಳೆ ಮುಂದುವರೆದಲ್ಲಿ ಮತ್ತಷ್ಟು ಬೆಳೆ ಹಾಳಾಗುತ್ತದೆಯೋ ಎಂಬ ಆತಂಕ ರೈತರನ್ನು ಕಾಡುತ್ತಿದೆ.
ಹೀಗೆ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ಹೊಲದಲ್ಲಿನ ಬೆಳೆಗಳಲ್ಲಿನ ಕಳೆ ಕೀಳಲು ಸಾಧ್ಯವಾಗುತ್ತಿಲ್ಲ ಜೊತೆಗೆ ಇನ್ನಿತರ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇಡೀ ದಿನ ಮೋಡ ಮುಸುಕಿದ ವಾತಾವರಣದಿಂದ ಬೆಳೆಗಳಿಗೆ ಕೀಟ ಬಾಧೆ ಹೆಚ್ಚಾಗಬಹುದು ಎಂಬ ಭಯ ರೈತರಲ್ಲಿದೆ.
ಎಕರೆ ತೊಗರಿ ಬೆಳೆಯಲ್ಲಿ ನಿರಂತರ ಮಳೆಯಿಂದಾಗಿ ಎರಡು ಎಕರೆ ತೊಗರಿ ಬೆಳೆ ಹಾನಿಯಾಗಿದ್ದು, ಉಳಿದ ಬೆಳೆ ಹಳದಿಯಾಗಿದೆ. ಬೆಳೆಗಳು ಹಾನಿಯಾದ ರೈತರ ಸಮೀಕ್ಷೆ ನಡೆಸಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕುಮಹಾಂತೇಶ ಪರೂತಿ, ರೈತ ಹಿರೇಬಾದವಾಡಗಿ ಗ್ರಾಮ
ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಮಳೆಯಿಂದ ಬೆಳೆಗಳು ಹಾನಿಯಾದ ರೈತರ ಹೊಲಗಳಿಗೆ ನಮ್ಮ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪ್ರಾಥಮಿಕ ವರದಿ ನೀಡುತ್ತಿದ್ದಾರೆಸೋಮಲಿಂಗಪ್ಪ ಅಂಟರತಾನಿ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ಹುನಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.