ADVERTISEMENT

ಹುನಗುಂದ | ಕಳಪೆ ಬೀಜ ಪೂರೈಕೆ: ಇಳುವರಿ ಕುಂಠಿತ

ಸಂಗಮೇಶ ಹೂಗಾರ
Published 12 ಡಿಸೆಂಬರ್ 2024, 4:37 IST
Last Updated 12 ಡಿಸೆಂಬರ್ 2024, 4:37 IST
ಹುನಗುಂದ ತಾಲ್ಲೂಕಿನ ಇಂದವಾರ ಗ್ರಾಮದ ರೈತರ ಹೊಲದಲ್ಲಿ ತೊಗರಿ ಗಿಡದಲ್ಲಿ ಹೂವು ಮತ್ತು ಕಾಯಿಗಳು ಕಡಿಮೆ ಪ್ರಮಾಣದಲ್ಲಿರುವುದು
ಹುನಗುಂದ ತಾಲ್ಲೂಕಿನ ಇಂದವಾರ ಗ್ರಾಮದ ರೈತರ ಹೊಲದಲ್ಲಿ ತೊಗರಿ ಗಿಡದಲ್ಲಿ ಹೂವು ಮತ್ತು ಕಾಯಿಗಳು ಕಡಿಮೆ ಪ್ರಮಾಣದಲ್ಲಿರುವುದು   

ಹುನಗುಂದ: ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ ಹವಾಮಾನ ವೈಪರೀತ್ಯ ಹಾಗೂ ಕಳಪೆ ಬೀಜದಿಂದ ತೊಗರಿ ಇಳುವರಿ ಕುಂಠಿತಗೊಂಡಿದ್ದು ರೈತರು ಕಂಗಾಲಾಗುವಂತೆ ಮಾಡಿದೆ. ಈ ಬಾರಿ ಹುನಗುಂದ ಮತ್ತು ಇಳಕಲ್ ತಾಲ್ಲೂಕುಗಳಲ್ಲಿ ಒಟ್ಟು 34,321 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ.

ಕಳೆದ ವರ್ಷ ಬರಗಾಲದ ಜೊತೆಗೆ ತೊಗರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿತ್ತು. ಅದರಿಂದ ಆಕರ್ಷಿತರಾಗಿ ಈ ವರ್ಷವು ಉತ್ತಮ ಬೆಲೆ ದೊರೆಯಬಹುದು ಎಂಬ ಅಂದಾಜಿನಲ್ಲಿ ಎರಡೂ ತಾಲ್ಲೂಕುಗಳ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು.

ಈ ಎರಡು ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿ ತೊಗರಿ ಗಿಡ ಆಳೆತ್ತರಕ್ಕೆ ಹುಲುಸಾಗಿ ಬೆಳೆದರೂ ನಿರೀಕ್ಷೆಗೆ ತಕ್ಕಂತೆ ಗಿಡದಲ್ಲಿ ಹೂವು ಕಾಯಿಗಳು ಕಟ್ಟಿಲ್ಲ. ಸಾಲ ಮಾಡಿ ಬೆಳೆದ ಬೆಳೆಯಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ಇಳುವರಿ ಕುಂಠಿತ ಗೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ADVERTISEMENT

ವಿಶೇಷವಾಗಿ ಮಳೆ ಆಶ್ರಿತ ಪ್ರದೇಶದಲ್ಲಿ ಉತ್ತಮ ಇಳುವರಿ ಬರಬಹುದು ಎಂಬ ನಿರೀಕ್ಷೆಯಲ್ಲಿ ರಾಯಚೂರು ಕಲಬುರಗಿ, ವಿಜಯಪುರ, ಯಾದಗಿರಿ ಸೇರಿದಂತೆ ಎರಡು ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಕೃಷಿ ಇಲಾಖೆ ರಾಷ್ಟ್ರೀಯ ಬೀಜ ನಿಗಮವು (ಎನ್.ಎಸ್.ಸಿ) ಪೂರೈಸಿದ ಜಿ.ಆರ್.ಜಿ 152 ಮತ್ತು ಜಿ.ಆರ್.ಜಿ 811 ಎಂಬ ಹೊಸ ತಳಿ ತೊಗರಿ ಬೀಜವನ್ನು ರೈತರು ಬಿತ್ತನೆ ಮಾಡಿದ್ದಾರೆ.

‘ನಮ್ಮ ಗ್ರಾಮದ 100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿ 6ರಿಂದ 7 ತಿಂಗಳಾಗಿದೆ. 15ರಿಂದ 20 ದಿನಗಳಲ್ಲಿ ತೊಗರಿ ಕಟಾವಿಗೆ ಬರುತ್ತದೆ. ಗಿಡದಲ್ಲಿ ಸರಿಯಾಗಿ ಕಾಯಿಗಳಿಲ್ಲದೆ ಎಲೆಗಳು ಉದುರಿ ಗಿಡ ಬೋಳಾಗಿವೆ’ ಎಂದು ತಿಮ್ಮಾಪುರ ಗ್ರಾಮದ ರೈತ ರಮೇಶ ಹೆರಕಲ್ ಅಳಲು ತೋಡಿಕೊಂಡರು.

ಹುನಗುಂದ ತಾಲ್ಲೂಕಿನ ನಾಗೂರು ಗ್ರಾಮದ ರೈತರ ಹೊಲದಲ್ಲಿ ತೊಗರಿ ಗಿಡದಲ್ಲಿ ಕಡಿಮೆ ಪ್ರಮಾಣದ ಹೂವು ಮತ್ತು ಕಾಯಿಗಳಿರುವುದು
ಹುನಗುಂದ: ತಾಲ್ಲೂಕಿನ ನಾಗೂರು ಗ್ರಾಮದ ರೈತರ ಹೊಲದಲ್ಲಿ ತೊಗರಿ ಗಿಡದಲ್ಲಿ ಕಡಿಮೆ ಪ್ರಮಾಣದ ಹೂವು ಮತ್ತು ಕಾಯಿಗಳಿರುವುದು
6 ಎಕರೆ ಹೊಲದಲ್ಲಿ ಜಿಆರ್‌ಜಿ 152 ತಳಿ ತೊಗರಿ ಬೀಜ ಬಿತ್ತನೆ ಮಾಡಿದ್ದು ಕಳಪೆ ಬೀಜದಿಂದಾಗಿ ಇಳುವರಿ ಬಂದಿಲ್ಲ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಂಡು ಸೂಕ್ತ ಪರಿಹಾರ ನೀಡಬೇಕು
ಶಿವಣ್ಣ ಕುರಬರ ರೈತ ಇಂದವಾರ

‘ಬೀಜ ಪೂರೈಕೆದಾರರ ವಿರುದ್ಧ ಕ್ರಮ ಕೈಗೊಳ್ಳಿ’

ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ನಾಗೂರ ಕೊಪ್ಪ ಎಸ್.ಎಂ ಮರೋಳ ಇಂದವಾರ ಸೇರಿದಂತೆ ಇತರೆ ಗ್ರಾಮಗಳ ರೈತರೂ ರೈತ ಸಂಪರ್ಕ ಕೇಂದ್ರಗಳಿಂದ ಜಿಆರ್‌ಜಿ 152 ಬೀಜ ಖರೀದಿಸಿ ಬಿತ್ತನೆ ಮಾಡಿದ್ದು ಆಳೆತ್ತರ ಬೆಳೆದಿವೆ ಆದರೆ ಫಲವಿಲ್ಲ. ಮೋಸ ಹೋಗಿದ್ದೇವೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಸರ್ಕಾರ ಬೀಜ ಪೂರೈಕೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಷ್ಟದಿಂದ ಸಂಕಷ್ಟಕ್ಕಿಡಾದ ರೈತರಿಗೆ ಸರ್ಕಾರ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಕಳಪೆ ಬೀಜದ ಬಗ್ಗೆ ಈಗಾಗಲೇ ಕೆಲವು ಗ್ರಾಮದ ರೈತರು ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ರೈತರು ಕೃಷಿ ಅಧಿಕಾರಿಗಳಿಗೆ ಕರೆ ಮಾಡಿದರು ಸ್ವೀಕರಿಸುತ್ತಿಲ್ಲ. ಮೊಬೈಲ್‌ಫೋನ್ ಸ್ವಿಚ್ಆಪ್ ಮಾಡಿದ್ದಾರೆ ಎಂದು ರೈತರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.