ಗುಳೇದಗುಡ್ಡ: ‘ಹಸಿವು ಮುಕ್ತ ಸಮಾಜ ನಿರ್ಮಾಣಕ್ಕೆ ಇಂದಿರಾ ಕ್ಯಾಂಟೀನ್ ಸಹಕಾರಿಯಾಗಿದೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಜಿಲ್ಲಾ ನಗರಾಭಿವೃದ್ಧಿಕೋಶ ಹಾಗೂ ಪುರಸಭೆ ಆಶ್ರಯದಲ್ಲಿ ಭಾನುವಾರ ಜರುಗಿದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಪಟ್ಟಣದಲ್ಲಿ ನೇಕಾರರು, ಬಡಜನರು ಹಾಗೂ ಕೂಲಿಕಾರರು ಇದ್ದಾರೆ. ಬಸ್ ನಿಲ್ದಾಣಕ್ಕೆ ಸಮೀಪವಿರುವ ಇಂದಿರಾ ಕ್ಯಾಂಟೀನ್ ಸುತ್ತಮುತ್ತ ಸರ್ಕಾರಿ ಕಾಲೇಜುಗಳು ಇರುವುದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಅನುಕೂಲವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಮಂಜೂರ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಡವರ ಹಸಿವು ಗೊತ್ತಿರುವುದರಿಂದ ಇಡೀ ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದಾರೆ. ಜೊತೆಗೆ ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಜನರ ಆರ್ಥಿಕ ಅಭಿವೃದ್ಧಿಗೆ ಅನುಕೂಲ ಮಾಡಿದ್ದಾರೆ ಎಂದರು.
ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ₹3.70 ಲಕ್ಷ ವೆಚ್ಚದಲ್ಲಿ ಎಲ್ಲ ಸೌಲಭ್ಯ ಒಳಗೊಂಡ ಗ್ರಂಥಾಲಯ ನಿರ್ಮಿಸಲಾಗುತ್ತಿದೆ ಎಂದರು. ₹3 ಕೋಟಿಗೂ ಅಧಿಕ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದರು.
ಪಟ್ಟಣದ ಗುರುಸಿದ್ಧೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀ ಮಾತನಾಡಿ, ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಅಗತ್ಯತೆ ಇತ್ತು. ಅದನ್ನು ಗಮನಿಸಿ ಶಾಸಕರು ಮುತುವರ್ಜಿಯಿಂದ ಸರ್ಕಾರದಿಂದ ಆರಂಭಿಸುವ ಕೆಲಸವನ್ನು ಮಾಡಿದ್ದಾರೆ. ಶಾಸಕರು ಕ್ರಿಯಾಶೀಲವಾಗಿದ್ದು ಗುಳೇದಗುಡ್ಡಕ್ಕೆ ಹಲವು ಯೋಜನೆಗಳನ್ನು ತರುವ ಮೂಲಕ ಪಟ್ಟಣ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಅಂಗವಿಕಲರ ಆರೈಕೆದಾರರಿಗೆ ಪುರಸಭೆಯಿಂದ 10 ಜನರಿಗೆ ತಲಾ ₹6 ಸಾವಿರ ಚೆಕ್ ವಿತರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ, ಉಪಾಧ್ಯಕ್ಷ ರಾಜಶೇಖರ್ ಹೆಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ ಕವಡಿಮಟ್ಟಿ, ಸದಸ್ಯ ಸಂತೋಷ ನಾಯನೇಗಲಿ, ವಿಠ್ಠಲ ಕಾವಡೆ, ರಫೀಕ ಕಲಬುರ್ಗಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಆರ್.ಹೆಬ್ಬಳ್ಳಿ, ರಂಗನಾಥ ಮೊಕಾಶಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.